
ಬಹ್ರೈಚ್, 02 ಮಾರ್ಚ್ (ಹಿ.ಸ.):
ಆ್ಯಂಕರ್:ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ರುಪೈದಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೊಬ್ಬ ತನ್ನ ತಂದೆ-ತಾಯಿ, ಸಹೋದರಿ ಹಾಗೂ ಅಜ್ಜಿಯನ್ನು ಕೊಡಲಿಯಿಂದ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಭಾನುವಾರ ರಾತ್ರಿ ನಡೆದಿದೆ.
ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಸಿಂಗ್ ನೀಡಿದ ಮಾಹಿತಿಯಂತೆ, ಬಸಂತ್‌ಪುರ ರುಡಾಲ್ (ರಾಮ್‌ಗಾಂವ್) ಗ್ರಾಮದ ರೈತ ಬದ್ಲುರಾಮ್ (60) ಅವರ ಕುಟುಂಬದಲ್ಲಿ ಪತ್ನಿ ಸಂಜು (56), ಮಗಳು ಪಾರ್ವತಿ (42), ಪುತ್ರರಾದ ಗುರುದೇವ್ ಮತ್ತು ನಿರಂಕರ್ ಹಾಗೂ ಅಜ್ಜಿ ಶೀತಲಾ (80) ವಾಸಿಸುತ್ತಿದ್ದರು.
ಕುಟುಂಬ ಸದಸ್ಯರ ಪ್ರಕಾರ, ಕೆಲವು ವರ್ಷಗಳ ಹಿಂದೆ ಭೂಮಿ ಮಾರಾಟದ ಹಣ ಹಂಚಿಕೆ ವಿಷಯದಲ್ಲಿ ಕಿರಿಯ ಪುತ್ರ ನಿರಂಕರ್ ಜೊತೆ ತಂದೆಗೆ ವಿವಾದವಿತ್ತು. ಭಾನುವಾರ ರಾತ್ರಿ ಹಣದ ಬೇಡಿಕೆ ಸಂಬಂಧ ಜಗಳ ಉಂಟಾಗಿ, ನಿರಂಕರ್ ಕೊಡಲಿಯಿಂದ ತಂದೆಯ ಮೇಲೆ ಹಲ್ಲೆ ನಡೆಸಿದನು. ತಡೆಯಲು ಮುಂದಾದ ತಾಯಿ, ಸಹೋದರಿ ಮತ್ತು ಅಜ್ಜಿಯ ಮೇಲೂ ಅವನು ಪ್ರಾಣಾಂತಿಕ ಹಲ್ಲೆ ನಡೆಸಿದ್ದಾನೆ.
ಘಟನೆಯ ನಂತರ ಸ್ಥಳೀಯರು ಹಿಡಿಯಲು ಯತ್ನಿಸಿದಾಗ, ಆರೋಪಿ ತನ್ನ ತಲೆಗೆ ಇಟ್ಟಿಗೆಯಿಂದ ಹೊಡೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ, ತಂದೆ, ತಾಯಿ, ಸಹೋದರಿ ಮತ್ತು ಅಜ್ಜಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಗೊಂಡ ಆರೋಪಿಯನ್ನು ಪ್ರಥಮ ಚಿಕಿತ್ಸೆಯ ನಂತರ ಲಕ್ನೋಗೆ ಕರೆದೊಯ್ಯಲಾಗಿದೆ.
ಸ್ಥಳದಿಂದ ರಕ್ತಸಿಕ್ತ ಕೊಡಲಿ ಮತ್ತು ಇಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರುದೇವ್ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆಸ್ತಿ ವಿಭಜನೆ ವಿವಾದವೇ ಘಟನೆಯ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa