
ಗದಗ, 02 ಮಾರ್ಚ್ (ಹಿ.ಸ.)
ಆ್ಯಂಕರ್: ಒಬ್ಬ ವ್ಯಕ್ತಿ ತನ್ನ ಅಹಂಕಾರವನ್ನು ಬಿಟ್ಟು ಸಮಾಜದೊಂದಿಗೆ ಒಂದಾಗಿ ಬೆರೆತು ನಡೆದಾಗ, ಆತ ಸಾಮಾನ್ಯ ವ್ಯಕ್ತಿಯಿಂದ ಅಪರೂಪದ ಸಾಮಾಜಿಕ ಶಕ್ತಿಯಾಗಿ ರೂಪುಗೊಳ್ಳುತ್ತಾನೆ. ಅಂಥದೇ ಶಕ್ತಿಯ ಜೀವಂತ ಪ್ರತಿರೂಪವಾಗಿ ಪೀರಸಾಬ ಕೌತಾಳ ಇಂದು ಗುರುತಿಸಿಕೊಂಡಿದ್ದಾರೆ.
‘ಸರ್ವ ಕ್ಷೇತ್ರಗಳ ಸೇವಕ, ಮಾನವ ಧರ್ಮದ ಸಾಧಕ’ ಎಂಬ ಬಿರುದು ಅವರಿಗೆ ಅಲಂಕಾರವಲ್ಲ ಅದು ಅವರ ಬದುಕಿನ ಪ್ರತಿಬಿಂಬವೇ ಆಗಿದೆ.
‘ತನ್ನ ಧರ್ಮವನ್ನು ಪ್ರೀತಿಸು, ಇತರ ಧರ್ಮಗಳನ್ನು ಗೌರವಿಸು’ ಎಂಬ ಮಾನವೀಯ ತತ್ವವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಬದುಕಿನ ಪ್ರತಿಕ್ಷಣದಲ್ಲೂ ಅನುಷ್ಠಾನಗೊಳಿಸಿರುವ ಪೀರಸಾಬ ಕೌತಾಳರು, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ. ಸದಾ ಲವಲವಿಕೆಯ ಮನಸ್ಸು, ಸ್ನೇಹಮಯ ನಡೆ–ನುಡಿ, ಎಲ್ಲರನ್ನೂ ಆತ್ಮೀಯವಾಗಿ ಸ್ವೀಕರಿಸುವ ಸ್ವಭಾವದಿಂದ ಅವರು ಸಮಾಜದ ವಿವಿಧ ವರ್ಗಗಳ ಜನರನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಕಾಲದಲ್ಲಿ ಹೊಡಿ–ಬಡಿ ನಡೆ, ಒರಟು ಭಾಷೆ ಮತ್ತು ತೀಕ್ಷ್ಣ ಸ್ವಭಾವಕ್ಕೆ ಪರಿಚಿತರಾಗಿದ್ದ ಪೀರಸಾಬ ಕೌತಾಳರ ಇಂದಿನ ವ್ಯಕ್ತಿತ್ವವನ್ನು ಕಂಡರೆ ಆಶ್ಚರ್ಯವೆನಿಸದೇ ಇರಲಾರದು. ಭಕ್ತಿ ಮಾರ್ಗದ ಅನುಕರಣೆಯೊಂದಿಗೆ, ಸಾಮಾಜಿಕ ಸೇವೆಯ ಚಿಂತನೆ, ಮಾನವೀಯ ಮೌಲ್ಯಗಳ ಅಳವಡಿಕೆಯಿಂದಾಗಿ ಅವರ ಬದುಕು ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ. ಈ ಬದಲಾವಣೆ ನೋಡಿದಾಗ, ಪಾಪದಿಂದ ಪುಣ್ಯದತ್ತ ಸಾಗಿದ ವಾಲ್ಮೀಕಿ ಮಹರ್ಷಿ ಅವರ ಜೀವನ ಯಶೋಗಾಥೆ ಅನಾಯಾಸವಾಗಿ ನೆನಪಿಗೆ ಬರುತ್ತದೆ.
ಕಿರಿಯ ವಯಸ್ಸಿನಲ್ಲಿಯೇ ಗದಗ–ಬೆಟಗೇರಿ ನಗರಸಭೆಯ 17 ಮತ್ತು 18ನೇ ವಾರ್ಡ್ಗಳಿಂದ ಸತತವಾಗಿ ಗೆಲುವು ಸಾಧಿಸಿ ‘ಸೋಲಿಲ್ಲದ ಸರದಾರ’ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪೀರಸಾಬ ಕೌತಾಳರು, ನಂತರ ಗದಗ–ಬೆಟಗೇರಿ ನಗರಸಭೆಯ ಅಧ್ಯಕ್ಷರಾಗಿ ಅವಳಿ ನಗರಕ್ಕೆ ನೀಡಿದ ಕೊಡುಗೆಗಳು ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವಂತಿವೆ. ಮೂಲಭೂತ ಸೌಕರ್ಯ, ನಗರಾಭಿವೃದ್ಧಿ, ಜನಪರ ಆಡಳಿತದ ಮೂಲಕ ಅವರು ಇತರ ಜನಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ.
ಇತ್ತೀಚೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ ಅವಧಿಯಲ್ಲಿ, ಸಂಸ್ಥೆಗೆ ಹೊಸ ಚೈತನ್ಯ, ಹೊಸ ದಿಕ್ಕು ಹಾಗೂ ಹೊಸ ಬದುಕು ಕಟ್ಟಿಕೊಟ್ಟಿರುವುದು ಅವರ ಕ್ರಿಯಾಶೀಲ ಮತ್ತು ದೂರದೃಷ್ಟಿಯ ಆಡಳಿತಕ್ಕೆ ಸಾಕ್ಷಿಯಾಗಿದೆ. ನೌಕರರ ಸಮಸ್ಯೆಗಳಿಗೆ ಸ್ಪಂದನೆ, ಪ್ರಯಾಣಿಕರ ಅನುಕೂಲ, ಸಂಸ್ಥೆಯ ಆರ್ಥಿಕ ಶಿಸ್ತು ಎಲ್ಲ ವಿಷಯಗಳಲ್ಲೂ ಅವರು ಜನಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಿದ್ದಾರೆ.
ಸಾಮೂಹಿಕ ವಿವಾಹಗಳ ಆಯೋಜನೆ, ಅಂಧ–ಅನಾಥ ಮಕ್ಕಳ ಸಹಾಯ, ದೀನ–ದಲಿತರ ಕಲ್ಯಾಣ, ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿ, ಶಿಕ್ಷಣ ಪ್ರಸಾರದ ಚಿಂತನೆ, ಸರ್ವಧರ್ಮ ಸಮನ್ವಯತೆಯ ಸಾಧನೆ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪೀರಸಾಬ ಕೌತಾಳರು ಸೇವೆಯ ಹೊಸ ಅಧ್ಯಾಯಗಳನ್ನು ಬರೆಯುತ್ತಿದ್ದಾರೆ. ಅವರ ನಡೆ ನುಡಿ, ತತ್ವ–ಆದರ್ಶಗಳು ಸಮಾಜಮುಖಿ ಚಿಂತನೆಯ ಜೀವಂತ ರೂಪವಾಗಿದೆ.
ವಿಶೇಷವಾಗಿ ಅಂಧ, ಅನಾಥ ಮಕ್ಕಳ ಹಾಗೂ ನಿರ್ಗತಿಕರ ಆಶ್ರಯವಾಗಿರುವ ಡಾ. ಪಂಡಿತ ಪುಟ್ಟರಾಜರ ಪುಣ್ಯಾಶ್ರಮಕ್ಕೆ ಸಲ್ಲಿಸುತ್ತಿರುವ ಸೇವೆಯಿಂದಾಗಿ ಪೀರಸಾಬ ಕೌತಾಳರು ಹಾಗೂ ಅವರ ಕುಟುಂಬವು ಸಮಾಜದಲ್ಲಿ ಆದರ್ಶಪ್ರಾಯವಾಗಿ ಗುರುತಿಸಿಕೊಂಡಿದೆ. ಸೇವೆಯ ಮೂಲಕವೇ ದೇವರನ್ನು ಕಾಣುವ ಮನೋಭಾವ ಅವರ ಬದುಕಿನ ಮೌಲ್ಯವಾಗಿದೆ.
ಸಾಮಾಜಿಕ, ಸಾಹಿತ್ಯಿಕ, ಸಂಗೀತ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾನವಾಗಿ ತೊಡಗಿಸಿಕೊಂಡು, ಸರ್ವಧರ್ಮದ ಸಾರವನ್ನು ಅಪ್ಪಿಕೊಂಡು ಮಾನವ ಧರ್ಮದ ನಡೆ–ನುಡಿಯಲ್ಲಿ ಸಾಗುತ್ತಿರುವ ಪೀರಸಾಬ ಕೌತಾಳರು ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆಂದರೆ ಅದು ಅತಿಶಯೋಕ್ತಿಯಲ್ಲ.
ಹೃದಯವಂತಿಕೆ, ಗುಣವಂತಿಕೆ, ಆತ್ಮೀಯ ಶ್ರೀಮಂತಿಕೆಯೊಂದಿಗೆ ಸಮಾಜಮುಖಿ ಚಿಂತನೆ ಹಾಗೂ ಭಕ್ತಿ ಮಾರ್ಗದ ನೆಲೆಸಾಲಿನಲ್ಲಿ ಸಾಗುತ್ತಿರುವ ಪೀರಸಾಬ ಕೌತಾಳರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ, ಸಮಾಜಮುಖಿ ಸೇವೆಗಳು ಲಭ್ಯವಾಗಲೆಂಬುದೇ ಅವರ ಅಭಿಮಾನಿಗಳ ಆಶಯವಾಗಿದೆ.
ಸರ್ವಧರ್ಮ, ಸರ್ವ ಕ್ಷೇತ್ರಗಳ ಸೇವಕರಾಗಿ ಮಾನವೀಯ ಮೌಲ್ಯಗಳ ಹಿರಿಮೆ–ಗರಿಮೆಯನ್ನು ಜೀವನದ ಮೌಲ್ಯವನ್ನಾಗಿ ಮಾಡಿಕೊಂಡಿರುವ ಪೀರಸಾಬ ಕೌತಾಳರಿಗೆ ಡಾ. ಪಂಡಿತ ಪುಟ್ಟರಾಜರು ಸದಾ ಅನುಗ್ರಹಿಸಲಿ ಎಂಬುದು ಸರ್ವಧರ್ಮ ಚಿಂತನಾ ಶಕ್ತಿಗಳ ಹಾಗೂ ಪತ್ರಕರ್ತರ ಆನಂದ ಸಾಲಿಗ್ರಾಮ ಸ್ನೇಹ ಬಳಗದ ಹೃದಯಪೂರ್ವಕ ಶುಭ ಹಾರೈಕೆಯಾಗಿದೆ ಎಂದು ಹಿರಿಯ ಪತ್ರಕರ್ತ ಆನಂತ ಎಸ್ ಕಾರ್ಕಳ ವಿಶೇಷ ಲೇಖನದ ಮೂಲಕ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP