
ನವದೆಹಲಿ, 02 ಮಾರ್ಚ್ (ಹಿ.ಸ.):
ಆ್ಯಂಕರ್:
ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 15 ರಂದು ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪರೇಡ್ ಮೈದಾನ ನಲ್ಲಿ ಬೃಹತ್ ಸಾರ್ವಜನಿಕ ರ್ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ರ್ರ್ಯಾಲಿಯು ರಾಜ್ಯ ಬಿಜೆಪಿ ರಾಜ್ಯ ಘಟಕವು ಪ್ರಾರಂಭಿಸಿದ ‘ಪರಿವರ್ತನ ಯಾತ್ರೆ’ಯ ಔಪಚಾರಿಕ ಸಮಾರೋಪ ಕಾರ್ಯಕ್ರಮವಾಗಲಿದೆ. ಭಾನುವಾರ ರಾಜ್ಯದ ಒಂಬತ್ತು ವಿಭಿನ್ನ ಸ್ಥಳಗಳಿಂದ ಆರಂಭವಾದ ಈ ಯಾತ್ರೆ, ಪಶ್ಚಿಮ ಬಂಗಾಳದ ಎಲ್ಲಾ 294 ವಿಧಾನಸಭಾ ಕ್ಷೇತ್ರಗಳನ್ನು ಆವರಿಸುವ ಉದ್ದೇಶ ಹೊಂದಿದೆ. ರಾಜ್ಯ ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವುಗೊಳಿಸುವಂತೆ ಈ ಯಾತ್ರೆ ಮುಂದುವರಿಯುತ್ತಿದೆ.
ಯಾತ್ರೆ ಭಾನುವಾರ ಆರಂಭವಾಗಿದ್ದು, ಸೋಮವಾರ ಮೂವರು ಕೇಂದ್ರ ಸಚಿವರ ಸಮ್ಮುಖದಲ್ಲಿ ಮುಂದುವರಿಯಲಿದೆ. ಆದರೆ ಮಾರ್ಚ್ 3 ರಂದು ನಡೆಯುವ ‘ಡೋಲ್ ಯಾತ್ರೆ’ ಮತ್ತು ಮಾರ್ಚ್ 4 ರ ‘ಹೋಳಿ’ ಹಬ್ಬದ ಹಿನ್ನೆಲೆಯಲ್ಲಿ ಆ ದಿನಗಳಲ್ಲಿ ಯಾವುದೇ ರ್ರ್ಯಾಲಿಗಲಕನ್ನು ಆಯೋಜಿಸಿಲ್ಲ. ಮಾರ್ಚ್ 5 ರಿಂದ ಯಾತ್ರೆ ಮರುಪ್ರಾರಂಭವಾಗಿ, ರಾಜ್ಯದ ವಿವಿಧ ಭಾಗಗಳಲ್ಲಿ ಸಭೆ-ಸಮಾವೇಶಗಳನ್ನು ನಡೆಸಿ, ಕೊನೆಗೆ ಮಾರ್ಚ್ 15 ರಂದು ಪ್ರಧಾನಿ ಮೋದಿಯವರ ರ್ರ್ಯಾಲಿಯೊಂದಿಗೆ ಸಮಾರೋಪಗೊಳ್ಳಲಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ದಕ್ಷಿಣ 24 ಪರಗಣ ಜಿಲ್ಲೆಯ ರಾಯ್ಡಿಘಿಯಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮವನ್ನು ಮೂಲತಃ ಭಾನುವಾರಕ್ಕೆ ನಿಗದಿಪಡಿಸಲಾಗಿತ್ತು, ಆದರೆ ನಂತರ ಸೋಮವಾರಕ್ಕೆ ಮುಂದೂಡಲಾಗಿದೆ. ಮಾರ್ಚ್ 15ರ ಬ್ರಿಗೇಡ್ ಪರೇಡ್ ಮೈದಾನದ ಮಹಾಸಭೆಯಲ್ಲಿ ಅವರು ಭಾಗವಹಿಸುತ್ತಾರೆಯೇ ಎಂಬುದನ್ನು ಬಿಜೆಪಿ ಇನ್ನೂ ಸ್ಪಷ್ಟಪಡಿಸಿಲ್ಲ.
ರಾಜ್ಯದಲ್ಲಿ ಅಧಿಕಾರ ಬದಲಾವಣೆಯ ಆಶಯದೊಂದಿಗೆ ಬಿಜೆಪಿ ತನ್ನ ಪ್ರಚಾರ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಪ್ರಧಾನಿ ಮೋದಿಯವರ ಕೋಲ್ಕತ್ತಾ ಭೇಟಿ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಜೊತೆಗೆ ಮತದಾರರನ್ನು ಆಕರ್ಷಿಸುವ ಮಹತ್ವದ ಕಾರ್ಯಕ್ರಮವಾಗಲಿದೆ ಎಂದು ಬಿಜೆಪಿ ರಾಜ್ಯ ಸಮಿತಿ ಸದಸ್ಯರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa