
ಗದಗ, 02 ಮಾರ್ಚ್ (ಹಿ.ಸ.)
ಆ್ಯಂಕರ್:“ಸವಿತಾ ಸಮಾಜದ ಯುವಕರು ಇನ್ನು ಮುಂದೆ ಕೇವಲ ಇತಿಹಾಸವನ್ನು ಓದುವವರಾಗದೆ, ಮೈದಾನದಲ್ಲೂ ಹಾಗೂ ಸಮಾಜದ ಎಲ್ಲ ರಂಗಗಳಲ್ಲೂ ಹೊಸ ಇತಿಹಾಸವನ್ನು ಸೃಷ್ಟಿಸುವ ಶಕ್ತಿಯಾಗಿ ಹೊರಹೊಮ್ಮಬೇಕು. ನಮ್ಮದು ಕೇವಲ ಸೇವೆಯ ಪರಂಪರೆಯಲ್ಲ; ಇದು ಸೂರ್ಯನ ತೇಜಸ್ಸಿನಂತಿರುವ ಸವಿತಾ ಮಹರ್ಷಿಗಳ ಸಾರ್ವಭೌಮ ಪರಂಪರೆ,” ಎಂದು ಕೃಷ್ಣಾ ಎಚ್. ಹಡಪದ, ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರು, ಕ್ರಾಂತಿಕಾರಿ ಧ್ವನಿಯಲ್ಲಿ ಕರೆ ನೀಡಿದರು.
ಗದಗ ನಗರದ ಜಿಲ್ಲಾ ಸವಿತಾ ಸಮಾಜ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪ್ರಚಂಡ ಯುವ ನಾಯಕ ಹಾಗೂ ಕ್ರೀಡಾ ಕಿರಣ ಸುನಿಲ ಎನ್. ರಾಯಚೂರ ಅವರ 42ನೇ ಜನ್ಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸವಿತಾ ಸಮಾಜದ ಯುವಕರು ಶಾಂತ ಸ್ವಭಾವಕ್ಕೆ ಸೀಮಿತರಾಗಬಾರದು; ಅನ್ಯಾಯದ ವಿರುದ್ಧ ಸಿಡಿದೇಳುವ ಕೆಚ್ಚೆದೆಯ ಸೈನಿಕರಾಗಬೇಕು ಎಂದು ಆಕ್ರೋಶಭರಿತವಾಗಿ ಹೇಳಿದರು.
“ಕ್ರೀಡಾ ಮೈದಾನದಲ್ಲಿ ಸುನಿಲ ರಾಯಚೂರ ತೋರುತ್ತಿರುವ ಛಲ, ಶಿಸ್ತು ಮತ್ತು ಹೋರಾಟದ ಮನೋಭಾವ ನಮ್ಮ ಇಡೀ ಸಮಾಜದ ಯುವಕರಿಗೆ ದಿಕ್ಕು ತೋರಿಸಲಿ. ಮೈದಾನದಲ್ಲಿ ತೋರುವ ಶೌರ್ಯವೇ ಸಮಾಜದಲ್ಲಿ ಗೌರವ ತಂದುಕೊಡುತ್ತದೆ. ಶತಮಾನಗಳಿಂದ ನಮ್ಮ ಮೇಲೆ ಹೇರಲಾದ ಮಾನಸಿಕ ಗುಲಾಮಗಿರಿ ಹಾಗೂ ಕೀಳರಿಮೆಯನ್ನು ಮೊದಲು ಕತ್ತರಿಸಿ ಎಸೆಯಬೇಕು. ನಾವು ಯಾರಿಗಿಂತಲೂ ಕಡಿಮೆಯಲ್ಲ. ನಮ್ಮ ಕೌಶಲ್ಯವಿಲ್ಲದೆ ಜಗತ್ತು ಸುಂದರವಾಗಿ ಕಾಣುವುದೇ ಅಸಾಧ್ಯ. ಆ ಆತ್ಮವಿಶ್ವಾಸ ನಿಮ್ಮ ರಕ್ತದಲ್ಲಿ ಹರಿಯಬೇಕು,” ಎಂದು ಕೃಷ್ಣಾ ಹಡಪದ ಅವರು ಯುವಜನತೆಯನ್ನು ಉದ್ದೇಶಿಸಿ ಹೇಳಿದರು.
ಈ ಸಂದರ್ಭದಲ್ಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಎನ್. ಕೋಟೆಕಲ್ಲ ಹಾಗೂ ಖಜಾಂಚಿ ಅರುಣ ರಾಂಪುರ ಮಾತನಾಡಿ, “ಇಂದು ಜಗತ್ತನ್ನು ಗೆಲ್ಲಲು ಯುದ್ಧಭೂಮಿಗೆ ಇಳಿಯಬೇಕಿಲ್ಲ; ಕ್ರೀಡಾ ಮೈದಾನ ಸಾಕು. ಒಲಿಂಪಿಕ್ಸ್ನಿಂದ ಹಿಡಿದು ಗಲ್ಲಿಯ ಕ್ರೀಡಾಕೂಟದವರೆಗೆ ಸವಿತಾ ಸಮಾಜದ ಧ್ವಜ ಹಾರಬೇಕು. ಸುನಿಲ ರಾಯಚೂರರಂತೆ ಪ್ರತಿಯೊಬ್ಬ ಯುವಕನೂ ಕ್ರೀಡೆಯನ್ನು ತನ್ನ ಉಸಿರಾಗಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.
ಹಿರಿಯರಾದ ಎಲ್ಲಪ್ಪ ರಾಯಚೂರ ಹಾಗೂ ನರಸಿಂಹ ಗುರುಜಾಲಕರ ಮಾತನಾಡಿ, “ನಾವು ಚದುರಿ ಹೋದರೆ ಶೋಷಿತರಾಗಿಯೇ ಉಳಿಯುತ್ತೇವೆ. ಒಂದಾದರೆ ಮಾತ್ರ ಅಧಿಕಾರದ ಗದ್ದುಗೆಯನ್ನು ಅಲುಗಾಡಿಸಬಹುದು. ಸವಿತಾ ಸಮಾಜವು ಕೇವಲ ವೋಟ್ ಬ್ಯಾಂಕ್ ಆಗದೇ, ನಿರ್ಣಾಯಕ ಶಕ್ತಿಯಾಗಿ ರೂಪುಗೊಳ್ಳಬೇಕು,” ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದ ಪ್ರಸ್ತಾವಿಕವಾಗಿ ಕೆಶಾಲಂಕಾರ ಸೇವಾ ಪರಿಷತ್ ಅಧ್ಯಕ್ಷರಾದ ಎಲ್ಲಪ್ಪ ರಾಂಪುರ ಮಾತನಾಡಿದರು.
ಸವಿತಾ ಮಹರ್ಷಿಗಳ ಪಾದದಡಿ ನಡೆದ ಈ ಸಂಭ್ರಮಾಚರಣೆಯಲ್ಲಿ, ಹುಟ್ಟುಹಬ್ಬದ ಹರಿಕಾರ ಸುನಿಲ ಎನ್. ರಾಯಚೂರ ಅವರನ್ನು ಸಮಾಜದ ಪರವಾಗಿ ‘ಕ್ರಾಂತಿಕಾರಿ ಯುವ ನಾಯಕ’ ಎಂದು ಗೌರವಿಸಿ ಸನ್ಮಾನಿಸಲಾಯಿತು. ಸುನಿಲ ರಾಯಚೂರ ಅವರು ಕೇಕ್ ಕತ್ತರಿಸುವ ಮೂಲಕ ಯುವ ನಾಯಕತ್ವ, ಕ್ರೀಡಾ ಸಾಧನೆ ಹಾಗೂ ಸಮಾಜಮುಖಿ ಹೋರಾಟದ ಸಂಕಲ್ಪವನ್ನು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹನುಮಂತಪ್ಪ ರಾಂಪುರ, ಪಾಂಡುರಂಗ ಕಾಳೆ, ಯುವ ನಾಯಕರುಗಳಾದ ಕೃಷ್ಣಾ ಬೂದೂರ, ವಿಜಯ ಬುದೂರ, ಸಾಗರ ಹಡಪದ, ಮಂಜುನಾಥ ರಾಂಪುರ, ರಾಹುಲ್ ನಾರಾಯಣಪೇಟ, ತುಕಾರಾಮ ವಡ್ಡೆಪಲ್ಲಿ ಸೇರಿದಂತೆ ಸವಿತಾ ಸಮಾಜದ ಪ್ರಮುಖರು, ಯುವ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ‘ಸವಿತಾ ಸಮಾಜಕ್ಕೆ ಜಯವಾಗಲಿ’ ಎಂಬ ಘೋಷಣೆಗಳಿಂದ ಕಾರ್ಯಕ್ರಮದ ಆವರಣ ಪ್ರತಿಧ್ವನಿಸಿತು.
---------------
ಹಿಂದೂಸ್ತಾನ್ ಸಮಾಚಾರ್ / lalita MP