
ಟೆಹ್ರಾನ್, 02 ಮಾರ್ಚ್ (ಹಿ.ಸ.):
ಆ್ಯಂಕರ್:ಇರಾನ್‌ನ ನೂತನ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರು ಸುಪ್ರೀಂ ನಾಯಕ ಅಲಿ ಖಮೇನಿ ಅವರ ಮರಣದ ನಂತರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ತೀಕ್ಷ್ಣ ಎಚ್ಚರಿಕೆ ನೀಡಿದರು. ಈ ಘಟನೆಯನ್ನು ಅವರು “ಮುಸ್ಲಿಮರ ವಿರುದ್ಧದ ಯುದ್ಧ ಘೋಷಣೆ” ಎಂದು ಬಣ್ಣಿಸಿ, ಹೊಣೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಇರಾನ್‌ನ “ಕಾನೂನುಬದ್ಧ ಕರ್ತವ್ಯ ಮತ್ತು ಹಕ್ಕು” ಎಂದು ಘೋಷಿಸಿದರು.
ರಾಷ್ಟ್ರದ ಜನತೆಗೆದ್ದೇಶಿಸಿ ಮಾತನಾಡಿದ ಅವರು, ಇರಾನ್ ಸಶಸ್ತ್ರ ಪಡೆಗಳು ಶತ್ರುಗಳ ತಾಣಗಳ ಮೇಲೆ “ಪ್ರಬಲ ದಾಳಿ”ಗಳನ್ನು ಮುಂದುವರಿಸಲಿವೆ ಎಂದು ಸ್ಪಷ್ಟಪಡಿಸಿದರು. ಅಲಿ ಖಮೇನಿ ಅವರನ್ನು “ಹುತಾತ್ಮ” ಎಂದು ಕರೆದ ಅವರು, ದೇಶವು ಅವರ ಮಾರ್ಗದರ್ಶನದಲ್ಲೇ ಮುಂದುವರಿಯಲಿದೆ ಎಂದು ಭರವಸೆ ನೀಡಿದರು.
ಹೊಸ ನಾಯಕತ್ವ ಮಂಡಳಿ ಅಧಿಕಾರಕ್ಕೆ
ಪರಿವರ್ತನಾ ಅವಧಿಯಲ್ಲಿ ಆಡಳಿತದ ಮೇಲ್ವಿಚಾರಣೆಗೆ “ಹೊಸ ನಾಯಕತ್ವ ಮಂಡಳಿ” ಅಧಿಕಾರ ವಹಿಸಿಕೊಂಡಿದೆ ಎಂದು ಅಧ್ಯಕ್ಷರು ತಿಳಿಸಿದರು. ಶತ್ರುಗಳ “ಪಿತೂರಿ”ಗಳನ್ನು ವಿಫಲಗೊಳಿಸಲು ಮಸೀದಿಗಳಲ್ಲೂ ಬೀದಿಗಳಲ್ಲೂ ಜನರು ಏಕತೆಯಿಂದ ಒಂದಾಗಬೇಕೆಂದು ಅವರು ಕರೆ ನೀಡಿದರು.
ಅಮೆರಿಕದ ನೆಲೆಗಳ ಮೇಲೆ ದಾಳಿ
ಇದೀಗ ಗಲ್ಫ್ ಪ್ರದೇಶ ಹಾಗೂ ಇರಾಕಿ ಕುರ್ದಿಸ್ತಾನದ ಭಾಗದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಹೊಸ ದಾಳಿಗಳನ್ನು ಇರಾನ್ ಘೋಷಿಸಿದೆ. ದಾಳಿಗಳಿಗೆ ಕಾರಣರಾದವರಿಗೆ “ಮರೆಯಲಾಗದ ಪಾಠ” ಕಲಿಸಲಾಗುವುದು ಎಂದು ಇರಾನ್ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಎಚ್ಚರಿಸಿದ್ದಾರೆ.
ಹಿಂದಿನ ನಿಲುವಿಗೆ ವಿರುದ್ಧ ಧೋರಣೆ
ಗಮನಾರ್ಹವಾಗಿ, 2024ರಲ್ಲಿ ಸುಧಾರಣಾವಾದಿ ಅಭ್ಯರ್ಥಿಯಾಗಿ ಆಯ್ಕೆಯಾದ ಪೆಜೆಶ್ಕಿಯಾನ್, ಸೆಪ್ಟೆಂಬರ್ 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವೇದಿಕೆಯಲ್ಲಿ “ರಾಷ್ಟ್ರೀಯ ಏಕತೆ” ಹಾಗೂ “ಜಗತ್ತಿನೊಂದಿಗೆ ರಚನಾತ್ಮಕ ಸಂವಾದ”ಕ್ಕೆ ಒತ್ತು ನೀಡಿದ್ದರು. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬೆನ್ನಟ್ಟುವುದಿಲ್ಲ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಉದ್ವಿಗ್ನತೆ ಕಡಿಮೆ ಮಾಡಲು ಸಿದ್ಧವಾಗಿದೆ ಎಂದು ಅವರು ಆಗ ಹೇಳಿದ್ದರು.
ಆದರೆ ಸರ್ವೋಚ್ಚ ನಾಯಕನ ಸಾವಿನ ಹಿನ್ನೆಲೆ ಹಾಗೂ ಪ್ರದೇಶದಲ್ಲಿ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ನಡುವೆ, ಹೊಸ ಅಧ್ಯಕ್ಷರ ಮೊದಲ ಭಾಷಣವೇ ಕಠಿಣ ಮತ್ತು ಪ್ರತೀಕಾರಾತ್ಮಕ ಸಂದೇಶವನ್ನು ನೀಡಿದೆ. ಇರಾನ್ ಪ್ರತೀಕಾರದ ಕ್ರಮದಿಂದ ಹಿಂದೆ ಸರಿಯುವುದಿಲ್ಲ ಎಂಬ ಸ್ಪಷ್ಟ ಸೂಚನೆ ಇದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa