


ಬಳ್ಳಾರಿ, 02 ಮಾರ್ಚ್ (ಹಿ.ಸ.)
ಆ್ಯಂಕರ್: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಟಿಲಿಸ್ಕೋಪ್ ತಯಾರಿಕೆಯ ವಿಶೇಷ ತರಬೇತಿ ಪಡೆದ ಬಳ್ಳಾರಿಯ ಶ್ರೀನಂದ ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಗವಿಸಿದ್ದ ಅಪೂರ್ವ ಸಾಧನೆಗೈದಿದ್ದಾರೆ. ಅವರು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಯೊಂದಿಗೆ ಇಂಡಿಯಾ ಬುಕ್ ಆಫ್ ಅವಾರ್ಡ್ಸ್ ಹಾಗೂ ಚಿನ್ನದ ಪದಕವನ್ನು ಸ್ವೀಕರಿಸಿ ನಮ್ಮ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶಾಲೆಯ ಮುಖ್ಯಸ್ಥ ವಿ. ಗಾಂಧಿ ಅವರು ವಿದ್ಯಾರ್ಥಿಯ ಸಾಧನೆಯನ್ನು ಶ್ಲಾಘಿಸಿ, ವಿಶ್ವದಲ್ಲಿ ಯುದ್ಧದಂತಹ ಅಶಾಂತ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಧನಾತ್ಮಕ ಚಿಂತನೆಯ ಮೂಲಕ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ನಮ್ಮ ಶಾಲೆಯ ವಿದ್ಯಾರ್ಥಿ ಗವಿಸಿದ್ದ ಇಂತಹ ವಿಶಿಷ್ಟ ಸಾಧನೆ ಮಾಡಿರುವುದು ಸಂಸ್ಥೆಗೆ ಗೌರವ ತಂದುಕೊಟ್ಟಿದೆ ಎಂದು ಅಭಿಮಾನದೊಂದಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎನ್. ವೀರಭದ್ರಗೌಡ ಅವರು ಸಾಧಕ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳು ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪತ್ರಿಕೆಗಳು ಸ್ಥಳೀಯದಿಂದ ವಿಶ್ವ ಮಟ್ಟದ ಪ್ರಮುಖ ವಿದ್ಯಮಾನಗಳವರೆಗೆ ಸರಳ ಭಾಷೆಯಲ್ಲಿ ಮಾಹಿತಿಯನ್ನು ಒದಗಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷ ಆರ್.ಎಚ್.ಎಂ. ಚನ್ನಬಸವಸ್ವಾಮಿ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಲು ಪರಿಷತ್ತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಗವಿಸಿದ್ದನ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಪರಿಣಮಿಸಲಿದೆ ಎಂದರು.
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಯು. ರಮೇಶ್ ಅವರು ವೈಜ್ಞಾನಿಕ ಚಿಂತನೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಆಜೀವ ಸದಸ್ಯ ಶಿವಾರೆಡ್ಡಿ ಹಾಗೂ ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶಮಠಂ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಹೆಚ್.ಜೆ. ಸರಿತಾ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್