ದುರ್ಗಾದೇವಿ ಜಾತ್ರಾ ಸಮಿತಿಗೆ ಸಿದ್ದಣ್ಣ ಪಲ್ಲೇದ ಅಧ್ಯಕ್ಷರಾಗಿ ಆಯ್ಕೆ
ಗದಗ, 19 ಮಾರ್ಚ್ (ಹಿ.ಸ.) ಆ್ಯಂಕರ್: ಗದಗ ನಗರದ ಐತಿಹಾಸಿಕ ಗಂಗಾಪುರಪೇಟೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಿದ್ದು, ಜಾತ್ರಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ
ಫೋಟೋ


ಗದಗ, 19 ಮಾರ್ಚ್ (ಹಿ.ಸ.)

ಆ್ಯಂಕರ್: ಗದಗ ನಗರದ ಐತಿಹಾಸಿಕ ಗಂಗಾಪುರಪೇಟೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಸಿದ್ಧತೆಗಳು ಆರಂಭಗೊಂಡಿದ್ದು, ಜಾತ್ರಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಣ್ಣ ಪಲ್ಲೇದ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಶ್ರೀ ದುರ್ಗಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಎಂ.ಎಸ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಮಹತ್ವದ ಆಯ್ಕೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಟ್ರಸ್ಟ್ ಸದಸ್ಯರು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಜಾತ್ರೆಯ ಯಶಸ್ವಿ ಆಯೋಜನೆಗಾಗಿ ಸಮರ್ಥ ನಾಯಕತ್ವ ಅಗತ್ಯವಿರುವುದನ್ನು ಒತ್ತಿಹೇಳಿ, ಸಿದ್ದಣ್ಣ ಪಲ್ಲೇದ ಅವರ ಹೆಸರು ಪ್ರಸ್ತಾಪಿಸಿ, ಏಕಮತದಿಂದ ಅಂಗೀಕರಿಸಿದರು.

2026ನೇ ಸಾಲಿನ ಜಾತ್ರಾ ಮಹೋತ್ಸವ ಸಮಿತಿಯ ಸಭೆಯಲ್ಲಿ ಈ ನೇಮಕವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಭೆಯಲ್ಲಿ, ಮೂರು ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಜಾತ್ರೆಯನ್ನು ಇನ್ನಷ್ಟು ವೈಭವೋಪೇತವಾಗಿ ಹಾಗೂ ಶಿಸ್ತಿನೊಂದಿಗೆ ನಡೆಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಭಕ್ತರ ಹೆಚ್ಚಿನ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಸ್ವಚ್ಛತೆ, ಸಾರಿಗೆ ವ್ಯವಸ್ಥೆ, ಭದ್ರತೆ ಮತ್ತು ವಸತಿ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಜಾತ್ರಾ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆಗಳು, ಹರಕೆ ಸಮರ್ಪಣೆ, ಉತ್ಸವ ಮೂರ್ತಿಗಳ ಮೆರವಣಿಗೆ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳನ್ನು ಭಕ್ತಿಪೂರ್ವಕವಾಗಿ ಹಾಗೂ ಸಂಪ್ರದಾಯಬದ್ಧವಾಗಿ ನಡೆಸಲು ಯೋಜನೆ ರೂಪಿಸುವುದರ ಮೇಲೂ ಸಭೆಯಲ್ಲಿ ಚರ್ಚೆ ನಡೆಯಿತು. ಜೊತೆಗೆ, ಸ್ಥಳೀಯ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವುದು, ತಾತ್ಕಾಲಿಕ ಅಂಗಡಿಗಳ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಹಾಗೂ ಇತರ ಇಲಾಖೆಗಳ ಸಹಕಾರ ಪಡೆಯುವ ಬಗ್ಗೆ ಸಹ ನಿರ್ಧಾರ ಕೈಗೊಳ್ಳಲಾಯಿತು.

ಈ ವೇಳೆ ಟ್ರಸ್ಟ್ ಉಪಾಧ್ಯಕ್ಷ ಬಸವರಾಜ ಬೆಳದಡಿ, ಪ್ರಧಾನ ಕಾರ್ಯದರ್ಶಿ ಸಂಜೀವ್ ಚವ್ಹಾಣ, ಕೋಶಾಧ್ಯಕ್ಷ ಬಸವರಾಜ ಅಣ್ಣಿಗೇರಿ ಸೇರಿದಂತೆ ಟ್ರಸ್ಟ್ನ ಇತರ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಜಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಲು ತಮ್ಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದಣ್ಣ ಪಲ್ಲೇದ ಅವರು, ಜಾತ್ರೆಯು ಗಂಗಾಪುರಪೇಟೆಯ ಸಂಸ್ಕೃತಿ ಮತ್ತು ಭಕ್ತಿಭಾವದ ಪ್ರತೀಕವಾಗಿದ್ದು, ಭಕ್ತರ ನಿರೀಕ್ಷೆಗೆ ತಕ್ಕಂತೆ ಜಾತ್ರೆಯನ್ನು ಶಿಸ್ತಿನಿಂದ ಹಾಗೂ ವೈಭವದಿಂದ ನಡೆಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಾ ಸಮಿತಿಗಳ ಸಹಕಾರದಿಂದ ಈ ಬಾರಿ ಜಾತ್ರೆಯನ್ನು ಇನ್ನಷ್ಟು ವಿಶೇಷವಾಗಿ ರೂಪಿಸುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande