
ಗದಗ, 19 ಮಾರ್ಚ್ (ಹಿ.ಸ.)
ಆ್ಯಂಕರ್:- ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂಭ್ರಮದ ಅಂಗವಾಗಿ ಸಮಾಜಸೇವೆ ಹಾಗೂ ಮಾನವೀಯತೆಯ ನೈಜ ಉದಾಹರಣೆಯಾಗಿ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಇಮಾಮಸಾಬ ಶೇಖ ಅವರು ಬಡ ಹಾಗೂ ಹಿಂದುಳಿದ ಕುಟುಂಬಗಳಿಗೆ ಆಹಾರ ಕಿಟ್ ಹಾಗೂ ಸೀರೆಗಳನ್ನು ವಿತರಿಸುವ ಮೂಲಕ ಹಬ್ಬದ ಸಂತೋಷವನ್ನು ಹಂಚಿಕೊಂಡರು.
ಗದಗ ತಾಲೂಕಿನ ಮುಳಗುಂದ ಪಟ್ಟಣದಲ್ಲಿಂದು ಆಯೋಜಿಸಲಾದ ಈ ಸೇವಾ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಒಳಗೊಂಡ ಆಹಾರ ಕಿಟ್ಗಳನ್ನು ಹಾಗೂ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ಹಬ್ಬದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಸಂಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಮಾಮಸಾಬ ಶೇಖ ಅವರು, ರಂಜಾನ್ ಹಬ್ಬದ ಮಹತ್ವ ಹಾಗೂ ದಾನಧರ್ಮದ ಮೌಲ್ಯವನ್ನು ವಿವರಿಸಿದರು. “ಹಬ್ಬದ ಸಂತೋಷವನ್ನು ನಮ್ಮ ಮನೆಗಳಲ್ಲಿ ಮಾತ್ರ ಆಚರಿಸುವುದರಿಂದ ಅದರ ಅರ್ಥ ಪೂರ್ಣವಾಗುವುದಿಲ್ಲ. ಬದಲಾಗಿ, ಬಡ ಮತ್ತು ಅಗತ್ಯವಿರುವ ಕುಟುಂಬಗಳ ಮನೆಗಳಲ್ಲಿ ಸಹ ಸಂತೋಷ ಹಂಚಿದಾಗ ಮಾತ್ರ ಹಬ್ಬದ ಸಾರ್ಥಕತೆ ಸಿಗುತ್ತದೆ. ಸಮಾಜದಲ್ಲಿ ಸಹಾನುಭೂತಿ, ಸಹಕಾರ ಹಾಗೂ ಬಾಂಧವ್ಯವನ್ನು ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ಹೇಳಿದರು.
ಇದೇ ವೇಳೆ, ಕಳೆದ ಸುಮಾರು 8 ವರ್ಷಗಳಿಂದ ನಿರಂತರವಾಗಿ ಈ ರೀತಿಯ ಸೇವಾ ಕಾರ್ಯವನ್ನು ಹಮ್ಮಿಕೊಂಡು ಬರುತ್ತಿರುವುದಾಗಿ ಅವರು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಸಹ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ್ ಅವರು, “ಇಮಾಮಸಾಬ ಶೇಖ ಅವರು ಪ್ರತಿ ವರ್ಷವೂ ಬಡ ಕುಟುಂಬಗಳ ನೆರವಿಗಾಗಿ ಮುಂದಾಗುತ್ತಿರುವುದು ಶ್ಲಾಘನೀಯ. ಅವರ ಸೇವಾ ಮನೋಭಾವವು ಇತರರಿಗೆ ಮಾದರಿಯಾಗಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತದೆ” ಎಂದು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಎಸ್.ಸಿ. ಬಡ್ಡಿ, ಅಶೋಕ ಸೋನಗೋಜಿ, ನಾಗಪ್ಪ ನೀಲಗುಂದ, ಹೊನ್ನಪ್ಪ ನೀಲಗುಂದ, ಮಹ್ಮದ ಕೈಫ್ ಶೇಖ, ಇರ್ಫಾನ್ ಸುಂಕದ, ಮುಸ್ತಾಕ್ ಅಹ್ಮದ ಅಕ್ಕಿ, ಗಂಗಪ್ಪ ಸುಂಕಾಪೂರ, ಹುಸೇನಸಾಬ ಕಲೇಗಾರ, ಇಸ್ಮಾಯಿಲ್ ಸುಂಕದ, ದಾದಾಖಲಂದರ ಮುಜಾವರ, ದಾವಲಸಾಬ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಒಟ್ಟಾರೆ, ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಹಮ್ಮಿಕೊಂಡ ಈ ಸೇವಾ ಕಾರ್ಯವು ಸಮಾಜದಲ್ಲಿ ಏಕತೆ, ಸೌಹಾರ್ದತೆ ಹಾಗೂ ಸಹಕಾರದ ಸಂದೇಶವನ್ನು ಸಾರಿದ್ದು, ಬಡ ಕುಟುಂಬಗಳ ಮುಖದಲ್ಲಿ ಹಬ್ಬದ ನಗು ಮೂಡಿಸುವಲ್ಲಿ ಯಶಸ್ವಿಯಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP