
ಬಾಗಲಕೋಟೆ, 19 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆ ಹಿನ್ನೆಲೆ ಜಾರಿಯಲ್ಲಿರುವ ನೀತಿ ಸಂಹಿತೆಯ ಮಧ್ಯೆ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹15.50 ಲಕ್ಷ ಹಣವನ್ನು ಚುನಾವಣಾ ಕ್ಷಿಪ್ರ ಪಡೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ತಾಲೂಕಿನ ನಾಯನೇಗಲಿ ತಪಾಸಣಾ ಕೇಂದ್ರದಲ್ಲಿ ವಾಹನ ತಪಾಸಣೆ ವೇಳೆ ಈ ಹಣ ಪತ್ತೆಯಾಗಿದ್ದು, ವಿಜಯಪುರ ಜಿಲ್ಲೆಯ ಬಬಲೇಶ್ವರದಿಂದ ಕುಷ್ಟಗಿ ಕಡೆಗೆ ತೆರಳುತ್ತಿದ್ದ ಕೆಎ-28, ಎಎ-4833 ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಿದ ವೇಳೆ ದಾಖಲೆ ರಹಿತ ನಗದು ಪತ್ತೆಯಾಯಿತು.
ಕಾರಿನಲ್ಲಿ ವಿಜಯ್ ಮೇಲಗಡೆ ಹಾಗೂ ಕುಮಾರ ಹಿರೇಮಠ ಎಂಬುವರು ಪ್ರಯಾಣಿಸುತ್ತಿದ್ದು, ಅವರ ಬಳಿಯಿದ್ದ ₹15.50 ಲಕ್ಷ ಹಣಕ್ಕೆ ಸಮರ್ಪಕ ದಾಖಲೆಗಳನ್ನು ತೋರಿಸಲಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತಪಾಸಣೆ ಕಟ್ಟು ನಿಟ್ಟಾಗಿದ್ದು, ಅನುಮಾನಾಸ್ಪದ ಹಣ, ವಸ್ತುಗಳ ಸಾಗಣೆ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ. ಜಪ್ತಿ ಮಾಡಿದ ಹಣದ ಬಗ್ಗೆ ಹೆಚ್ಚಿನ ಪರಿಶೀಲನೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande