
ಬಾಗಲಕೋಟೆ, 19 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ತೀವ್ರ ನಿಗಾವಹಿಸಿದೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಪ್ರಮುಖ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಿ, ವಾಹನಗಳ ಸಮಗ್ರ ತಪಾಸಣೆ ಹಾಗೂ ಪರಿಶೀಲನೆ ನಡೆಸಲಾಗುತ್ತಿದೆ. ಚುನಾವಣಾ ಅವಧಿಯಲ್ಲಿ ಅಕ್ರಮ ಹಣ, ಮದ್ಯ, ಉಡುಗೊರೆ ಸಾಮಗ್ರಿಗಳು ಅಥವಾ ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಬಹುದಾದ ವಸ್ತುಗಳ ಸಾಗಾಣಿಕೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ತಪಾಸಣಾ ಕೇಂದ್ರಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಗುತ್ತಿದ್ದು, ಅಗತ್ಯ ದಾಖಲೆಗಳಿಲ್ಲದೆ ಸಾಗಿಸುವ ನಗದು ಅಥವಾ ಇತರ ವಸ್ತುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಈ ಹಿನ್ನೆಲೆ ಸಾರ್ವಜನಿಕರು ತಮ್ಮ ವಾಹನಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ತಪಾಸಣೆ ವೇಳೆ ಪೊಲೀಸರೊಂದಿಗೆ ಸಹಕರಿಸಿ, ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಕೈಜೋಡಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande