
ಟೆಹ್ರಾನ್, 16 ಮಾರ್ಚ್ (ಹಿ.ಸ.):
ಆ್ಯಂಕರ್:
ಮಧ್ಯಪೂರ್ವದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್ ಸಂಘರ್ಷ ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಇನ್ನಷ್ಟು ಉದ್ವಿಗ್ನವಾಗಿದೆ. ಇಸ್ರೇಲ್–ಇರಾನ್ ಹಾಗೂ ಅಮೆರಿಕ ನಡುವಿನ ಸಂಘರ್ಷದಲ್ಲಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ಹೆಚ್ಚಾಗಿವೆ.
ಇರಾನ್ ತನ್ನ ಸೇನೆಯು ಕುವೈತ್, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲಿ ಇರುವ ಅಮೆರಿಕ ಮತ್ತು ಇಸ್ರೇಲ್ ಸಂಬಂಧಿತ ಹಲವು ನೆಲೆಗಳ ಮೇಲೆ ದಾಳಿ ನಡೆಸಿದುದಾಗಿ ಹೇಳಿಕೊಂಡಿದೆ. ನಾಲ್ಕು ಅಮೆರಿಕದ ವಾಯುನೆಲೆಗಳ ಮೇಲೆ ಸಂಘಟಿತ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಲಾಗಿದೆ ಎಂದು ಇರಾನ್ ಘೋಷಿಸಿದೆ.
ಇರಾನ್‌ನ ಸೇನಾ ಘಟಕವಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತನ್ನ ನೌಕಾಪಡೆಯಿಂದ ಭಾನುವಾರ ಬೆಳಗಿನ ಜಾವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಾಲ್ಕು ಸಮನ್ವಿತ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಿದೆ. ಈ ದಾಳಿಗಳಲ್ಲಿ ಕಮಾಂಡ್ ಸೆಂಟರ್, ವಾಯು ಸಂಚಾರ ನಿಯಂತ್ರಣ ಗೋಪುರ ಮತ್ತು ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಲಾಗಿದೆ ಎಂದು ವರದಿ ತಿಳಿಸಿದೆ.
ಉಪಗ್ರಹ ಚಿತ್ರಗಳಲ್ಲಿ ಗುರಿಯಿಟ್ಟ ಸ್ಥಳಗಳಿಗೆ ಭಾರೀ ಹಾನಿ ಸಂಭವಿಸಿರುವುದು ಕಂಡುಬಂದಿದೆ ಎಂದು ಇರಾನ್ ಸೇನೆ ಹೇಳಿಕೊಂಡಿದೆ.
ಇನ್ನೊಂದೆಡೆ, ಲೆಬನಾನ್ ದಕ್ಷಿಣ ಭಾಗದಲ್ಲಿಯೂ ಸಂಘರ್ಷ ತೀವ್ರಗೊಂಡಿದ್ದು, ಇಸ್ರೇಲ್ ರಕ್ಷಣಾ ಪಡೆಗಳ ಯುದ್ಧ ವಿಮಾನಗಳು ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿವೆ. ನಬತಿಹ್ ಜಿಲ್ಲೆಯ ಜಬ್ದಿನ್ ಪಟ್ಟಣ ಸೇರಿದಂತೆ ಹನಿನ್, ಕಾಫ್ರ್, ಐತಾ ಅಲ್-ಶಾಬ್ ಹಾಗೂ ಯಾಟರ್ ಪ್ರದೇಶಗಳಲ್ಲಿ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ.
ಇದಕ್ಕೂ ಮೊದಲು ಅಮೆರಿಕದ ಮಿಚಿಗನ್ ರಾಜ್ಯದಲ್ಲಿನ ಒಂದು ಸಿನಗಾಗ್ ಮೇಲೆ ದಾಳಿ ನಡೆಸಿದ ವ್ಯಕ್ತಿಯ ಸಹೋದರನು ಹೆಜ್ಬೊಲ್ಲಾ ಸಂಘಟನೆಯಲ್ಲಿ ಕಮಾಂಡರ್ ಆಗಿದ್ದಾನೆ ಎಂದು ಐಡಿಎಫ್ ಹೇಳಿಕೊಂಡಿತ್ತು. ಕಳೆದ ವಾರ ಹೆಜ್ಬೊಲ್ಲಾ ಸೇನಾ ನೆಲೆಯ ಮೇಲೆ ನಡೆದ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಇಬ್ರಾಹಿಂ ಎಂಬ ಕಮಾಂಡರ್ ಸಾವನ್ನಪ್ಪಿದ್ದಾನೆ ಎಂದು ವರದಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa