
ಗದಗ, 15 ಮಾರ್ಚ್ (ಹಿ.ಸ.)
ಆ್ಯಂಕರ್: ಸಮಾಜವು ಆಧುನಿಕತೆಯ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿರುವ ಈ ಕಾಲಘಟ್ಟದಲ್ಲಿಯೂ ಕೆಲವು ಸಾಮಾಜಿಕ ಪಿಡುಗುಗಳು ಇನ್ನೂ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಅವುಗಳಲ್ಲಿ ಪ್ರಮುಖವಾದುದು ‘ಬಾಲ್ಯ ವಿವಾಹ’. ಹೆಣ್ಣುಮಕ್ಕಳು ಶಿಕ್ಷಣ ಪಡೆದು ತಮ್ಮ ಕನಸುಗಳನ್ನು ಸಾಕಾರಗೊಳಿಸಬೇಕಾದ ವಯಸ್ಸಿನಲ್ಲಿ ಮದುವೆಯ ಜವಾಬ್ದಾರಿಗಳನ್ನು ಹೊರುವಂತಾಗುತ್ತಿರುವುದು ಇಂದಿಗೂ ಸಮಾಜದ ಕೆಲವು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಹಿ ವಾಸ್ತವ. ಮಕ್ಕಳ ಉಜ್ವಲ ಭವಿಷ್ಯವನ್ನು ಕತ್ತಲೆಗೆ ತಳ್ಳುವ ಈ ದುಷ್ಪ್ರಥೆಯನ್ನು ನಿರ್ಮೂಲನೆ ಮಾಡಲು ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವ ಅಗತ್ಯವಾಗಿದೆ.
ಭಾರತೀಯ ಕಾನೂನಿನ ಪ್ರಕಾರ, ವಿವಾಹವಾಗಲು ಹುಡುಗಿಗೆ ಕನಿಷ್ಠ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ತುಂಬಿರಬೇಕು. ಇದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆ ಮಾಡುವುದು ಕಾನೂನುಬಾಹಿರವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ–2006ರ ಅನ್ವಯ ಬಾಲ್ಯ ವಿವಾಹಕ್ಕೆ ಕಾರಣವಾಗುವ ಪೋಷಕರು, ಮದುವೆ ನೆರವೇರಿಸುವವರು ಹಾಗೂ ಅದರಲ್ಲಿ ಭಾಗಿಯಾಗುವವರ ವಿರುದ್ಧ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವೂ ಇದೆ. ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತೀವ್ರ ಹಾನಿಯಾಗುವುದಲ್ಲದೆ, ಅತೀ ಕಡಿಮೆ ವಯಸ್ಸಿನಲ್ಲಿ ಗರ್ಭಧರಿಸುವ ಪರಿಸ್ಥಿತಿ ಉಂಟಾಗಿ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೂ ಅಪಾಯ ಎದುರಾಗುವ ಸಾಧ್ಯತೆಗಳಿವೆ.
ಇಂತಹ ಗಂಭೀರ ಸಮಸ್ಯೆಯ ವಿರುದ್ಧ ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಾ. ನಂದಾ ಹಣಬರಟ್ಟಿ ಅವರು ವಿಶಿಷ್ಟವಾದ ಹೆಜ್ಜೆ ಇಟ್ಟಿದ್ದಾರೆ.
ತಮ್ಮ ಆಡಳಿತಾತ್ಮಕ ಕಾರ್ಯಭಾರಗಳ ನಡುವೆಯೂ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಅವರು ವ್ಯಂಗ್ಯಚಿತ್ರಗಳ ಮೂಲಕ ಬಾಲ್ಯ ವಿವಾಹದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಡಾ. ನಂದಾ ಹಣಬರಟ್ಟಿ ಅವರು ಸ್ವತಃ ರಚಿಸಿರುವ ಕಾರ್ಟೂನ್ ಚಿತ್ರಗಳು ಮಕ್ಕಳ ಮನಸ್ಸಿಗೆ ತಾಕುವಂತಿರುವುದರ ಜೊತೆಗೆ ಗಂಭೀರ ಸಂದೇಶವನ್ನು ನೀಡುತ್ತಿವೆ. ಪ್ರತಿಯೊಂದು ಚಿತ್ರವೂ ಸಮಾಜದ ಮನಸ್ಸನ್ನು ಕೆದಕುವಂತಿದ್ದು, ಬಾಲ್ಯ ವಿವಾಹದ ದುಷ್ಪರಿಣಾಮಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ. ಒಂದರಲ್ಲಿ “ಬಾಲ್ಯ ವಿವಾಹ ನಿಲ್ಲಿಸಿ – ಮಕ್ಕಳಿಗೆ ಶಿಕ್ಷಣ ಕೊಡಿಸಿ” ಎಂಬ ಸಂದೇಶದೊಂದಿಗೆ, ಮಗುವಿನ ಕೈಯಲ್ಲಿ ಆಟದ ಬೊಮ್ಮೆಯ ಬದಲು ಪುಸ್ತಕವಿರಬೇಕು ಎಂಬ ಸಾರ್ಥಕ ಸಂದೇಶವನ್ನು ಮೂಡಿಸಿದ್ದಾರೆ.
ಇನ್ನೊಂದು ಚಿತ್ರದಲ್ಲಿ “ಮತದಾನಕ್ಕೆ ವಯಸ್ಸಿಲ್ಲ, ಕೆಲಸಕ್ಕೆ ವಯಸ್ಸಿಲ್ಲ, ಆದರೆ ಮದುವೆಗೆ ಮಾತ್ರ ಏಕೆ?” ಎಂಬ ಪ್ರಶ್ನೆಯನ್ನು ಸಮಾಜದ ಮುಂದೆ ಇಟ್ಟು ಬಾಲ್ಯದ ಅಮಾಯಕತೆಯನ್ನು ಸ್ಪಷ್ಟವಾಗಿ ತೋರಿಸಿದ್ದಾರೆ. ಮಗು ಹೂವಿನಂತೆ ಅರಳಬೇಕಾದ ಬಾಲ್ಯವನ್ನು ಮದುವೆ ಎಂಬ ಬೇಡದ ಬಿಗಿಯಲ್ಲಿ ಬಂಧಿಸುವುದು ಎಷ್ಟು ಅನ್ಯಾಯ ಎಂಬುದನ್ನು ಅವರ ಚಿತ್ರಗಳು ಪರಿಣಾಮಕಾರಿಯಾಗಿ ಹೇಳುತ್ತವೆ.
ಡಾ. ನಂದಾ ಅವರ ಈ ವ್ಯಂಗ್ಯಚಿತ್ರಗಳು ಕೇವಲ ಕಾಗದದ ಮೇಲಿನ ಕಲೆಯಾಗಿ ಉಳಿಯದೇ, ಗದಗ ಜಿಲ್ಲೆಯ ವಿವಿಧ ವಸತಿ ನಿಲಯಗಳು, ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ದೃಶ್ಯ ಮಾಧ್ಯಮವು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ, ಈ ಕಾರ್ಟೂನ್ ಚಿತ್ರಗಳು ವಿದ್ಯಾರ್ಥಿಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಸ್ಪಷ್ಟ ಅರಿವು ಮೂಡಿಸುವಲ್ಲಿ ಸಹಕಾರಿಯಾಗುತ್ತಿವೆ.
ಅಧಿಕಾರಿಯಾಗಿ ಕೇವಲ ಕಛೇರಿ ಕಡತಗಳೊಳಗೆ ಸೀಮಿತವಾಗದೇ, ತಮ್ಮ ಕಲಾತ್ಮಕ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಿರುವ ಡಾ. ನಂದಾ ಹಣಬರಟ್ಟಿ ಅವರ ಈ ಪ್ರಯತ್ನಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಧಿಕಾರ ಮತ್ತು ಕಲೆ ಒಂದಾಗಿದಾಗ ಸಮಾಜದ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸುಲಭವಾಗುತ್ತದೆ ಎಂಬುದಕ್ಕೆ ಅವರ ಕಾರ್ಯವೇ ನಿದರ್ಶನವಾಗಿದೆ.
ಸಾಮಾಜಿಕ ಕಳಕಳಿಯೊಂದಿಗೆ ಮೂಡಿಬಂದ ಈ “ಕುಂಚದ ಕ್ರಾಂತಿ” ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಮಹತ್ವದ ಪ್ರೇರಣೆಯಾಗಿದೆ. ಮಕ್ಕಳ ಕನಸುಗಳು ಕಮರುವ ಮುನ್ನವೇ ಅವುಗಳನ್ನು ನಾಶ ಮಾಡುವಂತಹ ಪದ್ಧತಿಗಳ ವಿರುದ್ಧ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂಬ ಸಂದೇಶವನ್ನು ಇದು ಸಾರುತ್ತಿದೆ.
“ಮಗು ಬೆಳೆಯಲಿ, ಓದಲಿ, ಆಡಲಿ – ಬಾಲ್ಯ ವಿವಾಹದ ಬೇಡಿ ಕಳಚಲಿ” ಎಂಬ ಘೋಷವಾಕ್ಯವು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ.
ಒಂದು ಹೆಣ್ಣು ಮಗು ಶಿಕ್ಷಣ ಪಡೆದು ಸ್ವಾವಲಂಬಿಯಾಗಿದರೆ, ಆಕೆಯೊಂದಿಗೇ ಇಡೀ ಕುಟುಂಬವೂ ಪ್ರಗತಿಯ ದಾರಿಗೆ ಸಾಗುತ್ತದೆ ಎಂಬುದು ಸತ್ಯ. ಆದ್ದರಿಂದ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ.
ಮಕ್ಕಳ ಕನಸುಗಳಿಗೆ ರೆಕ್ಕೆ ನೀಡುವ, ಅವರ ಬಾಲ್ಯವನ್ನು ಉಳಿಸುವ ಮತ್ತು ಉತ್ತಮ ಭವಿಷ್ಯ ನಿರ್ಮಿಸುವ ದಿಕ್ಕಿನಲ್ಲಿ ಸಮಾಜ ಒಗ್ಗಟ್ಟಿನಿಂದ ಮುಂದೆ ಬರಬೇಕಾದ ಅಗತ್ಯ ಇಂದು ಇನ್ನಷ್ಟು ಹೆಚ್ಚಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP