

ಗದಗ, 15 ಮಾರ್ಚ್ (ಹಿ.ಸ.)
ಆ್ಯಂಕರ್:-ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದ ಕಾರ್ಮೋಡ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯ ಪರಿಣಾಮ ಇದೀಗ ಗದಗ ನಗರದ ಧಾರ್ಮಿಕ ಸಂಸ್ಥೆಗಳಿಗೂ ತಟ್ಟತೊಡಗಿದೆ. ಗದಗ ನಗರದ ಪ್ರಸಿದ್ಧ ಶ್ರೀ ವೀರೇಶ್ವರ ಪುಣ್ಯಾಶ್ರಮ (ಪುಟ್ಟರಾಜ ಮಠ)ದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿದ್ದು, ಇದರಿಂದ ಅಂಧ ಹಾಗೂ ಅನಾಥ ವಿದ್ಯಾರ್ಥಿಗಳ ದೈನಂದಿನ ಅನ್ನದಾಸೋಹಕ್ಕೂ ತೊಂದರೆ ಉಂಟಾಗಿದೆ.
ಮಠದಲ್ಲಿ ಬಳಸಲಾಗುತ್ತಿದ್ದ ಗ್ಯಾಸ್ ಸಿಲಿಂಡರ್ಗಳು ಸಂಪೂರ್ಣ ಖಾಲಿಯಾಗಿದ್ದು, ಹೊಸ ಸಿಲಿಂಡರ್ಗಳ ಸರಬರಾಜು ಆಗದ ಕಾರಣ ಅಡುಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪರಿಣಾಮವಾಗಿ ಮಠದ ಅಡುಗೆಮನೆಗಳಲ್ಲಿ ಗ್ಯಾಸ್ ಒಲೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಸದ್ಯಕ್ಕೆ ಸೌದೆ ಒಲೆಗಳ ಮೂಲಕವೇ ಅಡುಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಪ್ರತಿದಿನವೂ ಸಾವಿರಾರು ಭಕ್ತರು ಹಾಗೂ ಅಂಧ-ಅನಾಥ ಮಕ್ಕಳು ಅನ್ನದಾಸೋಹವನ್ನು ಪಡೆಯುತ್ತಾರೆ. ಸಾಮಾನ್ಯವಾಗಿ ಇಲ್ಲಿ ರೊಟ್ಟಿ, ಚಪಾತಿ, ಮಿರ್ಚಿ, ಉಪ್ಪಿಟ್ಟು ಸೇರಿದಂತೆ ಹಲವು ವಿಧದ ಆಹಾರಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಸಿಲಿಂಡರ್ ಕೊರತೆಯಿಂದಾಗಿ ಈಗ ಕೇವಲ ಅನ್ನ, ಸಾಂಬಾರ್, ಪಲ್ಯ ಹಾಗೂ ಸಿಹಿ ಪದಾರ್ಥಗಳಿಗೆ ಮಾತ್ರ ಸೀಮಿತವಾಗಬೇಕಾದ ಪರಿಸ್ಥಿತಿ ಎದುರಾಗಿದೆ. ರೊಟ್ಟಿ, ಚಪಾತಿ ಮುಂತಾದ ಪದಾರ್ಥಗಳನ್ನು ಸಿದ್ಧಪಡಿಸಲು ಸಾಧ್ಯವಾಗದೆ ಮಠದ ವಿದ್ಯಾರ್ಥಿಗಳು ಮತ್ತು ಭಕ್ತರಿಗೆ ನಿರಾಸೆಯಾಗಿದೆ.
ಮಠದಲ್ಲಿ ಪ್ರತಿದಿನ ಮೂರು ರಿಂದ ನಾಲ್ಕು ಸಾವಿರ ಭಕ್ತರಿಗೆ ನಿತ್ಯ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ. ಅಷ್ಟೊಂದು ಜನರಿಗೆ ಸೌದೆ ಒಲೆಗಳಲ್ಲಿ ಅಡುಗೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಡುಗೆ ಸಿಬ್ಬಂದಿ ಹೆಚ್ಚಿನ ಶ್ರಮಪಟ್ಟು, ಹೊಗೆ ಹಾಗೂ ಉಷ್ಣತೆಯ ನಡುವೆ ಅಡುಗೆ ಮಾಡುವ ಮೂಲಕ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಮಠದಲ್ಲಿ ವಾಸಿಸುವ ಅಂಧ ಹಾಗೂ ಅನಾಥ ಮಕ್ಕಳಿಗೆ ನಿತ್ಯ ಊಟದ ವ್ಯವಸ್ಥೆ ಕಲ್ಪಿಸುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಡುಗೆ ಮಾಡುವ ಸಿಬ್ಬಂದಿಯೂ ಸೌದೆ ಒಲೆಗಳ ಝಳದಲ್ಲಿ ದಿನಪೂರ್ತಿ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಮಾತನಾಡಿದ ಶ್ರೀ ಮಠದ ಆಡಳಿತಾಧಿಕಾರಿ ಹೇಮಂತ ಶಾಸ್ತ್ರಿ ಅವರು, “ಮಠದಲ್ಲಿ ಬಳಸುವ ಎಲ್ಲಾ ಸಿಲಿಂಡರ್ಗಳು ಖಾಲಿಯಾಗಿವೆ. ಹೊಸ ಸಿಲಿಂಡರ್ಗಳ ಸರಬರಾಜು ಆಗದ ಕಾರಣ ಅಡುಗೆ ಮಾಡುವುದೇ ಕಷ್ಟಕರವಾಗಿದೆ. ಸಾವಿರಾರು ಭಕ್ತರಿಗೆ ಅನ್ನದಾಸೋಹ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲೆ ಇದೆ. ಆದ್ದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಿಲಿಂಡರ್ ಸರಬರಾಜು ಮಾಡಲು ಮುಂದಾಗಬೇಕು,” ಎಂದು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ, ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧದ ಪರಿಣಾಮದಿಂದ ಉಂಟಾಗಿರುವ ಇಂಧನ ಕೊರತೆ ಈಗ ಗದಗ ಜಿಲ್ಲೆಯ ಧಾರ್ಮಿಕ ಹಾಗೂ ಸೇವಾ ಸಂಸ್ಥೆಗಳಿಗೂ ತಟ್ಟತೊಡಗಿದ್ದು, ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಂಡು ಇಂತಹ ಸಂಸ್ಥೆಗಳಿಗೆ ಅಗತ್ಯವಾದ ಗ್ಯಾಸ್ ಸಿಲಿಂಡರ್ಗಳನ್ನು ಸರಬರಾಜು ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP