
ಧಾರವಾಡ, 15 ಮಾರ್ಚ್ (ಹಿ.ಸ.):
ಆ್ಯಂಕರ್:
ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ–1997ರಡಿ ನೋಂದಣಿಯಾಗಿರುವ ಕೆಲವು ಸೌಹಾರ್ದ ಸಹಕಾರಿ ಸಂಘಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಸಮಾಪನೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ 15 ದಿನಗಳೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆಗಳನ್ನು ಧಾರವಾಡ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಡಾ. ಹಣಶೆಟ್ಟಿ ಬಿಲ್ಡಿಂಗ್, ಯು.ಬಿ.ಹಿಲ್, 1ನೇ ಕ್ರಾಸ್, ರಾಜೀವ್ ಗಾಂಧಿ ಶಾಲೆಯ ಹಿಂಭಾಗ, ಧಾರವಾಡ–580001 ವಿಳಾಸಕ್ಕೆ ಸಲ್ಲಿಸಬಹುದು.
ಸಮಾಪನೆಗೆ ಒಳಪಡಲಿರುವ ಸಂಘಗಳಲ್ಲಿ ಮಂಜುಶ್ರೀ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ (ಹುಬ್ಬಳ್ಳಿ), ಗ್ರಾಮೀಣ ಮಹಿಳಾ ವಿವಿದೋದ್ದೇಶ ಸೌಹಾರ್ದ ಸಹಕಾರಿ (ಗುಡಗೇರಿ–ಕುಂದಗೋಳ), ಶ್ರೀ ಸಾಯಿಬಾಬಾ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ (ಹುಬ್ಬಳ್ಳಿ), ಪ್ರಭಾತ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ (ಹುಬ್ಬಳ್ಳಿ), ಅನುಗ್ರಹ ವಿವಿದೋದ್ದೇಶ ಸೌಹಾರ್ದ ಸಹಕಾರಿ (ಹುಬ್ಬಳ್ಳಿ), ಪರಿವರ್ತನಾ ಕ್ರೆಡಿಟ್ ಸೌಹಾರ್ದ ಸಹಕಾರಿ (ಹುಬ್ಬಳ್ಳಿ), ಜೈ ರಾಮಜಿ ಕ್ರೆಡಿಟ್ ಸೌಹಾರ್ದ ಸಹಕಾರಿ (ಧಾರವಾಡ) ಹಾಗೂ ಮಂಜುನಾಥೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ (ಸತ್ತೂರು–ಧಾರವಾಡ) ಸೇರಿವೆ.
ಈ ಸಂಘಗಳು ಉದ್ದೇಶಿತ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳದೇ ಇರುವುದಲ್ಲದೆ, ಉಪನಿಯಮಗಳಿಗೆ ಅನುಗುಣವಾಗಿ ಯಾವುದೇ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ. ಆಡಳಿತ ಮಂಡಳಿ ಚುನಾವಣೆ ನಡೆಸುವಲ್ಲಿ, ವಾರ್ಷಿಕ ಮಹಾಸಭೆಗಳನ್ನು ಆಯೋಜಿಸುವಲ್ಲಿ ಹಾಗೂ ಲೆಕ್ಕಪರಿಶೋಧನೆ ನಡೆಸುವಲ್ಲಿಯೂ ವಿಫಲವಾಗಿವೆ ಎಂದು ತಿಳಿಸಲಾಗಿದೆ. ಸದಸ್ಯರಲ್ಲಿಯೂ ಸಂಘಗಳನ್ನು ಮುಂದುವರಿಸುವ ಆಸಕ್ತಿ ಕಾಣದ ಹಿನ್ನೆಲೆಯಲ್ಲಿ ಸಮಾಪನೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಕುರಿತು ಆಕ್ಷೇಪಣೆಗಳು ಇದ್ದಲ್ಲಿ 15 ದಿನಗಳೊಳಗೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಲಭ್ಯವಾಗದಿದ್ದಲ್ಲಿ, ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ–1997ರ ಕಲಂ 48(5)(i) ಅನ್ವಯ ಈ ಸಹಕಾರಿ ಸಂಘಗಳನ್ನು ಸಮಾಪನೆಗೊಳಿಸಲಾಗುವುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa