ನಾಲ್ಕೈದು ದಿನಗಳ ಮುಟ್ಟಿನ ರಜೆ ಕಾರ್ಯಸಾಧುವಲ್ಲ : ಸಚಿವ ಸಂತೋಷ್ ಲಾಡ್
ಬೆಂಗಳೂರು, 14 ಮಾರ್ಚ್ (ಹಿ.ಸ.): ಆ್ಯಂಕರ್: ಮಹಿಳಾ ಉದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರ ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕ ಸಚಿವರು ಹಾಗೂ ಕರ್ನಾಟಕ ಋತುಚಕ್ರ ನೀತಿ 2025ರ ಜಾರಿ ಹಿಂದೆ ಬಹು ಮುಖ್ಯ ಪಾತ್ರ ವಹಿಸಿದ್ದ ಸಂತ
ನಾಲ್ಕೈದು ದಿನಗಳ ಮುಟ್ಟಿನ ರಜೆ ಕಾರ್ಯಸಾಧುವಲ್ಲ : ಸಚಿವ ಸಂತೋಷ್ ಲಾಡ್


ಬೆಂಗಳೂರು, 14 ಮಾರ್ಚ್ (ಹಿ.ಸ.):

ಆ್ಯಂಕರ್:

ಮಹಿಳಾ ಉದ್ಯೋಗಿಗಳು ಮತ್ತು ವಿದ್ಯಾರ್ಥಿನಿಯರ ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕ ಸಚಿವರು ಹಾಗೂ ಕರ್ನಾಟಕ ಋತುಚಕ್ರ ನೀತಿ 2025ರ ಜಾರಿ ಹಿಂದೆ ಬಹು ಮುಖ್ಯ ಪಾತ್ರ ವಹಿಸಿದ್ದ ಸಂತೋಷ್ ಲಾಡ್ ಅವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಮನಿಸಿದ್ದೇನೆ,‌ ಘನವೆತ್ತ ಕೋರ್ಟ್ ಅಭಿಪ್ರಾಯಪಟ್ಟಿರುವಂತೆ, ನಾಲ್ಕೈದು ದಿನಗಳ ರಜೆ ಮತ್ತು ಅದನ್ನು ಕಾನೂನನ್ನಾಗಿ ರೂಪಿಸಿ ಜಾರಿಗೆ ತರುವುದು ಪ್ರಾಯೋಗಿಕವಾಗಿ ಸಾಧುವಲ್ಲ. ಅಲ್ಲದೇ ನಮ್ಮ ರಾಜ್ಯ ಸರ್ಕಾರವು ಪ್ರತಿ ತಿಂಗಳು ಒಂದು ದಿನದ ವೇತನಸಹಿತ ರಜೆಯನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಅನ್ವಯಿಸಿ ರೂಪಿಸಿರುವ ನೀತಿಯಯನ್ನು ಪ್ರಶಂಶಿಸಿರುವುದು ಸ್ವಾಗತಾರ್ಹ. ನಮ್ಮ ರಾಜ್ಯದ ಮುಟ್ಟಿನ ರಜೆ ನೀತಿಯ ಕುರಿತು, ನಾವು ಸಂಬಂಧಿಸಿದ ಎಲ್ಲ ತಜ್ಞರು, ಉದ್ಯೋಗದಾತರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ವೈದ್ಯರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ವ್ಯಾಪಕ ಚರ್ಚೆ ಮಾಡಿ, ಸಾಧಕ-ಬಾಧಕಗಳನ್ನು ಪರಿಶೀಲಿಸಿ ಸೂಕ್ತ ನೀತಿಯೊಂದನ್ನು ಜಾರಿಗೆ ತಂದಿದ್ದೇವೆ.

ಘನ ನ್ಯಾಯಾಲಯದ ಇನ್ನುಳಿದ ಅಭಿಪ್ರಾಯಗಳಾದ, ʻʻರಾಷ್ಟ್ರಮಟ್ಟದಲ್ಲಿ ಕಾನೂನು ರೂಪಿಸಿದರೆ ಮಹಿಳೆಯರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ ಹಾಗೂ ಯುವತಿಯರ ಕೀಳರಿಮೆಗೆ ಕಾರಣವಾಗುತ್ತದೆʼʼ ಎಂಬ ವಿಷಯದ ಕುರಿತು ಎಲ್ಲ ಭಾಗೀದಾರರು ಮತ್ತು ಸರ್ಕಾರಗಳ ಮಟ್ಟದಲ್ಲಿ ವ್ಯಾಪಕ ಚರ್ಚೆಯ ಅಗತ್ಯವಿದೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ, ದೇಶದ ಮಹಿಳೆಯರಿಗೆ ಸೂಕ್ತವಾಗುವಂತೆ ಋತುಚಕ್ರ ರಜೆ‌ನೀತಿ ರೂಪಿಸಿದರೆ ಅದು ಸ್ವಾಗತಾರ್ಹ. ಎಂದು ಸಂತೋಷ್ ಲಾಡ್ ಅವರು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ‌.

ಇನ್ನು ಮುಟ್ಟಿನ ರಜೆಯನ್ನು ನಾಲ್ಕೈದು ದಿನಗಳಿಗೆ ವಿಸ್ತರಿಸಿ ರಾಷ್ಟ್ರವ್ಯಾಪಿ ಅನ್ವಯವಾಗುವಂತೆ ಕಾನೂನು ರೂಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande