
ಕೋಲಾರ, ೧೪ ಮಾರ್ಚ್ (ಹಿ.ಸ):
ಆ್ಯಂಕರ್ : ಪರಿಸರ ಸಂರಕ್ಷಣೆಯಿಂದ ಜೀವ ಸಂಕುಲದ ರಕ್ಷಣೆಯಾದರೆ, ವಿಜ್ಞಾನ ಮೂಢನಂಬಿಕೆಗಳನ್ನು ನಾಶಮಾಡಿ ದೇಶದ ಸಮಗ್ರ ಅಭಿವೃದ್ದಿಗೆ ದಾರಿದೀಪವಾಗಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್ ಅಭಿಪ್ರಾಯಪಟ್ಟರು.
ಶಾಲೆಯ ಆವರಣದಲ್ಲಿ ಪರಿಸರ ಕ್ಲಬ್ ಹಾಗೂ ವಿಜ್ಞಾನ ಕ್ಲಬ್ ಸಹಯೋಗದಲ್ಲಿ ಪ್ರಬಂಧ,ಚರ್ಚಾ ಮತ್ತಿತರ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಮತ್ತು ವಿಜ್ಞಾನ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಅವರು ಮಾತನಾಡುತ್ತಿದ್ದರು.
ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿರುವ ವಿಜ್ಞಾನದಿಂದ ಮೂಢ ನಂಬಿಕೆಗಳು ನಾಶವಾಗಿವೆ ಮತ್ತು ಇಂದು ವಿಶ್ವಮಟ್ಟದಲ್ಲಿ ಭಾರತದ ಘನತೆ, ಶಕ್ತಿ ಸಾಕಾರಗೊಳ್ಳಲು ಸಹಾ ವಿಜ್ಞಾನವೇ ಕಾರಣವಾಗಿದೆ, ಇಸ್ರೋ ಮೂಲಕ ನಾವು ಚಂದ್ರನAಗಳ ತಲುಪಿದ್ದೇವೆ, ಮಂಗಳದತ್ತಲೂ ಸಾಗುತ್ತಿದ್ದೇವೆ ಎಂದರು.
ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅರಿವು ಅತಿ ಮುಖ್ಯವಾಗಿದೆ, ಶಾಲೆಯ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದು ತಪ್ಪು ಎಂದ ಅವರು, ಹಸಿಕಸ,ಒಣ ಕಸ ಬೇರ್ಪಡಿಸುವುದರಿಂದಾಗುವ ಪ್ರಯೋಜನಗಳ ಕುರಿತು ಅರಿವು ಮೂಡಿಸಿ ನಿಮ್ಮ ಮನೆಯಲ್ಲಿ ಪೋಷಕರಿಗೂ ಮಾರ್ಗದರ್ಶನ ನೀಡಿ ಎಂದರು.
ಆಹಾರವನ್ನು ಬೇಯಿಸುವುದರಿಂದ ಹಿಡಿದು ಪ್ರಯಾಣ, ಅಧ್ಯಯನ ಮತ್ತು ಸಂವಹನದವರೆಗೆ ವಿಜ್ಞಾನ ತಾರ್ಕಿಕವಾಗಿ ಯೋಚಿಸಲು ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವಿಜ್ಞಾನ ಶಿಕ್ಷಕಿ ಹಾಗೂ ಇಕೋ ಕ್ಲಬ್ ಅಧ್ಯಕ್ಷೆ ಎಂ.ಬಿ.ಶ್ವೇತಾ ಮಾತನಾಡಿ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣ ಎಲ್ಲರ ಗುರಿಯಾಗಬೇಕು, ಇಂದು ಪ್ಲಾಸ್ಟಿಕ್ ಬಳಕೆಯಿಂದಾಗಿರುವ ಮಾಲಿನ್ಯದ ಕುರಿತು ಅರಿತು ಅಂಗಡಿಗಳಿಗೆ ಹೋಗುವಾಗ ಕೈಚೀಲ ಹಿಡಿದು ಹೋಗುವ ಪರಿಪಾಠ ಬೆಳೆಸಿಕೊಳ್ಳಿ, ನಿಮ್ಮ ಮನೆಯವರಿಗೆ ತಿಳಿಸಿ ಎಂದರು.
ಭಾರತ ಇಂದು ವಿಜ್ಞಾನ ಕ್ಷೇತ್ರದಲ್ಲಿ ವಿಶ್ವಗೌರವಕ್ಕೆ ಪಾತ್ರವಾಗಿದೆ, ಸರ್ ಸಿ.ವಿ. ರಾಮನ್, ಡಾ. ಎಪಿಜೆ ಅಬ್ದುಲ್ ಕಲಾಂ ಮತ್ತು ಸಿ.ವಿ. ಶೇಷಾದ್ರಿ ಅವರಂತಹ ಮಹಾನ್ ವಿಜ್ಞಾನಿಗಳನ್ನು ಸೃಷ್ಟಿಸಿದೆ ಎಂದು ವಿವರಿಸಿದರು.
ಶಿಕ್ಷಕಿ ಭವಾನಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ, ನಾವೀನ್ಯತೆ ಮತ್ತು ಆವಿಷ್ಕಾರವನ್ನು ಗೌರವಿಸಲು ಶಾಲೆಯ ವಿಜ್ಞಾನ ಕ್ಲಬ್ ಕೆಲಸ ಮಾಡುತ್ತಿದೆ, ಇದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬಲಗೊಳಿಸುತ್ತದೆ ಎಂದು ತಿಳಿಸಿದರು.
ವಿಜ್ಞಾನವು ಪ್ರಯೋಗಾಲಯಗಳು ಅಥವಾ ಪಠ್ಯಪುಸ್ತಕಗಳಿಗೆ ಸೀಮಿತವಾಗಿಲ್ಲ - ಇದು ಮಗುವಿನ ದೈನಂದಿನ ಜೀವನದ ಒಂದು ಭಾಗವಾಗಿದೆ, ಸಸ್ಯಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ತಂತ್ರಜ್ಞಾನವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅನ್ವೇಷಿಸುವವರೆಗೆ ವಿಜ್ಞಾನವು ಕುತೂಹಲ, ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ,ಪರಿಸರ ಕ್ಲಬ್ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧೆಗಳು, ಪ್ರತಿಭಾನ್ವೇಷಣೆ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ವೆಂಕಟರೆಡ್ಡಿ,ಸುಗುಣಾ, ಕೆ.ಲೀಲಾ,ಶ್ರೀನಿವಾಸಲು, ರಮಾದೇವಿ, ಚೈತ್ರಾ ಮತ್ತಿತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್