
ಬಾಗಲಕೋಟೆ, 14 ಮಾರ್ಚ್ (ಹಿ.ಸ.)
ಆ್ಯಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರಡಿ ಭೂಸ್ವಾಧೀನಗೊಂಡ ಜಮೀನುಗಳಿಗೆ ಪರಿಹಾರ ವಿತರಣೆ ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಉಪಸ್ಥಿತಿಯಲ್ಲಿ ಬಾಗಲಕೋಟೆಯಲ್ಲಿ ಸಾಂಕೇತಿಕವಾಗಿ ರೈತರಿಗೆ ಪರಿಹಾರ ವಿತರಣೆ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3 ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಡಿ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು. ಇದರಿಂದ ಹೆಚ್ಚುವರಿ ಸುಮಾರು 130 ಟಿಎಂಸಿ ನೀರನ್ನು ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಯೋಜನೆಗಾಗಿ ಭೂಮಿ ನೀಡುತ್ತಿರುವ ರೈತರಿಗೆ ನ್ಯಾಯಯುತ ಪರಿಹಾರ ನೀಡುವ ಉದ್ದೇಶದಿಂದ ನೀರಾವರಿ ಭೂಮಿಗೆ ಪ್ರತಿ ಎಕರೆಗೆ ₹40 ಲಕ್ಷ ಹಾಗೂ ಒಣಭೂಮಿಗೆ ಪ್ರತಿ ಎಕರೆಗೆ ₹30 ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ತಿಳಿಸಿದರು.
ಇಂದು ಸಾಂಕೇತಿಕವಾಗಿ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಯೋಜನೆಗಾಗಿ ಭೂಮಿ ನೀಡಿದ ಎಲ್ಲಾ ರೈತರಿಗೆ ಹಂತ ಹಂತವಾಗಿ ಪರಿಹಾರ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಸದಸ್ಯರು, ಜನಪ್ರತಿನಿಧಿಗಳು, ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande