
ಬೆಂಗಳೂರು, 13 ಮಾರ್ಚ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಉಂಟಾಗಿರುವ ಅಡಿಗೆ ಅನಿಲ ಪೂರೈಕೆ ವ್ಯತ್ಯಯದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅನಿಲ ಪೂರೈಕೆ ಸಂಸ್ಥೆಗಳ ಅಧಿಕಾರಿಗಳು ಹಾಗೂ ಹೋಟೆಲ್ ಮಾಲೀಕರ ಸಂಘದ ಪ್ರತಿನಿಧಿಗಳು ಭಾಗವಹಿಸಿದರು.
ಸಭೆಯಲ್ಲಿ ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್ ಮತ್ತು ಗೇಲ್ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ರಾಜ್ಯದಲ್ಲಿ ಅಡಿಗೆ ಅನಿಲ ಪೂರೈಕೆಯ ಸ್ಥಿತಿ ಹಾಗೂ ಎದುರಾಗಿರುವ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಿದರು. ವಿಶೇಷವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಕೊರತೆಯಿಂದ ಹೋಟೆಲ್ ಉದ್ಯಮ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕನಕವಳ್ಳಿ, ಆಯುಕ್ತ ರವಿ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಡಾ. ಹೆಚ್. ನಟರಾಜ್ ಸೇರಿದಂತೆ ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ದಿವ್ಯ, ಮುರಳಿ ಚಾರ್, ಸುಬ್ರತ್ ಚಟರ್ಜಿ, ರಾಜೇಶ್ ಸಿಂಗ್, ಸಂಜಯ್ ಕುಮಾರ್ ಸಿಂಗ್, ಪ್ರಣಯ ದೇವನಾಗನ್, ರವಿ ಕುಮಾರ್ ತಂಡಲ್, ಪ್ರಸೂನ್ ಮಾಲಿ ಹಾಗೂ ನಿಗಮದ ಪ್ರಧಾನ ವ್ಯವಸ್ಥಾಪಕ ಮಂಜುನಾಥ್ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅಡಿಗೆ ಅನಿಲದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಸರಬರಾಜು ಸುಧಾರಿಸುವುದು ಹಾಗೂ ಹೋಟೆಲ್ ಉದ್ಯಮಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa