ಇಂಧನ ಉಳಿತಾಯಕ್ಕೆ ತೋಂಟದಾರ್ಯ ಸ್ವಾಮೀಜಿ ಕರೆ
ಗದಗ, 13 ಮಾರ್ಚ್ (ಹಿ.ಸ.) ಆ್ಯಂಕರ್: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ಭವಿಸಿರುವ ಯುದ್ಧದ ಭೀತಿ ಹಾಗೂ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ಉಂಟಾಗುತ್ತಿರುವ ಅಸ್ಥಿರತೆಯ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಇಂಧನ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ
ಫೋಟೋ


ಗದಗ, 13 ಮಾರ್ಚ್ (ಹಿ.ಸ.)

ಆ್ಯಂಕರ್: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ಭವಿಸಿರುವ ಯುದ್ಧದ ಭೀತಿ ಹಾಗೂ ಜಾಗತಿಕ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಸರಬರಾಜಿನಲ್ಲಿ ಉಂಟಾಗುತ್ತಿರುವ ಅಸ್ಥಿರತೆಯ ಹಿನ್ನೆಲೆಯಲ್ಲಿ ದೇಶದಲ್ಲಿಯೂ ಇಂಧನ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಗದಗ ನಗರದ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಮಠದ ಪೀಠಾಧಿಪತಿ ಶ್ರೀ ಸಿದ್ಧರಾಮ ಸ್ವಾಮೀಜಿ ಜನರಿಗೆ ಇಂಧನ ಉಳಿತಾಯ ಮಾಡುವಂತೆ ಕರೆ ನೀಡಿದ್ದು, ಜೀವನಶೈಲಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಕೇವಲ ರಾಜಕೀಯ ಪ್ರಭುತ್ವ ಸಾಧನೆಗಾಗಿ ನಡೆಯುತ್ತಿದ್ದು, ಅದರ ಪರಿಣಾಮವನ್ನು ಸಾಮಾನ್ಯ ಜನತೆ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು. ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳು ತಮ್ಮ ಪ್ರಭುತ್ವ ಸಾಧನೆಗಾಗಿ ಯುದ್ಧ ಮಾರ್ಗವನ್ನು ಅನುಸರಿಸುತ್ತಿರುವುದು ವಿಶ್ವದ ಶಾಂತಿಗೆ ಅಪಾಯಕಾರಿಯಾಗಿದೆ. ಯುದ್ಧದಿಂದ ಯಾರಿಗೂ ಲಾಭವಾಗುವುದಿಲ್ಲ; ಅದು ಕೇವಲ ವಿನಾಶ ಮತ್ತು ಸಂಕಷ್ಟವನ್ನು ಮಾತ್ರ ತರಲಿದೆ ಎಂದು ಅವರು ಎಚ್ಚರಿಸಿದರು.

ಯುದ್ಧದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿದ್ದು, ಅದರ ಪರಿಣಾಮ ದೇಶದ ವಿವಿಧ ಕ್ಷೇತ್ರಗಳ ಮೇಲೆ ಬೀಳುವ ಸಾಧ್ಯತೆ ಇದೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಮಠಗಳ ದಾಸೋಹ ವ್ಯವಸ್ಥೆಯ ಮೇಲೂ ಪರಿಣಾಮ, ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಗದಗದ ಶ್ರೀ ತೋಂಟದಾರ್ಯ ಮಠದಲ್ಲಿ ಪ್ರತಿದಿನ ಸಾವಿರಾರು ಭಕ್ತರು, ವಿದ್ಯಾರ್ಥಿಗಳು, ಬಡವರು ಹಾಗೂ ನಿರ್ಗತಿಕರು ಅನ್ನ ದಾಸೋಹದ ಮೂಲಕ ಊಟ ಸ್ವೀಕರಿಸುತ್ತಾರೆ. ದಿನಕ್ಕೆ ಮೂರು ಹೊತ್ತು ಅನ್ನದಾಸೋಹ ನಡೆಯುವ ಈ ಮಠದಲ್ಲಿ ಅಡುಗೆಗಾಗಿ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಹಾಗೂ ಸೌದೆ ಒಲೆಗಳನ್ನು ಬಳಸಲಾಗುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಕಾರಣ ಮಠದಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಸ್ತುತ ಮಠದಲ್ಲಿ ಇನ್ನೆರಡು ದಿನಗಳಿಗೆ ಮಾತ್ರ ಸಾಕಾಗುವಷ್ಟು ಕಮರ್ಷಿಯಲ್ ಸಿಲಿಂಡರ್ ಸ್ಟಾಕ್ ಇರುವುದಾಗಿ ತಿಳಿದುಬಂದಿದ್ದು, ಪರಿಸ್ಥಿತಿ ಇದೇ ರೀತಿಯಾಗಿ ಮುಂದುವರಿದರೆ ಅನ್ನದಾಸೋಹ ವ್ಯವಸ್ಥೆಯಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡುವ ಅನಿವಾರ್ಯತೆ ಎದುರಾಗಬಹುದು ಎಂಬ ಚರ್ಚೆಗಳು ಕೇಳಿಬರುತ್ತಿವೆ.

ಜನರು ಇಂಧನ ಉಳಿತಾಯಕ್ಕೆ ಮುಂದಾಗಬೇಕು

ಈ ಹಿನ್ನೆಲೆಯಲ್ಲಿ ಜನರು ಇಂಧನವನ್ನು ಜಾಗರೂಕತೆಯಿಂದ ಬಳಕೆ ಮಾಡಬೇಕು ಎಂದು ಶ್ರೀ ಸಿದ್ಧರಾಮ ಸ್ವಾಮೀಜಿ ಕರೆ ನೀಡಿದ್ದಾರೆ. ಅನಗತ್ಯವಾಗಿ ವಾಹನಗಳನ್ನು ಬಳಸುವ ಪ್ರವೃತ್ತಿಯನ್ನು ಕಡಿಮೆ ಮಾಡಬೇಕು. ಅಗತ್ಯವಿದ್ದಾಗ ಮಾತ್ರ ವಾಹನ ಬಳಸಬೇಕು. ಸಣ್ಣಪುಟ್ಟ ಕೆಲಸಗಳಿಗೆ ಸಾಧ್ಯವಾದರೆ ನಡೆದು ಹೋಗುವುದು ಅಥವಾ ಸೈಕಲ್ ಬಳಸುವುದು ಉತ್ತಮ ಎಂದು ಸಲಹೆ ನೀಡಿದರು.

ಇಂಧನ ಉಳಿತಾಯವನ್ನು ಕೇವಲ ವೈಯಕ್ತಿಕ ವಿಚಾರವಾಗಿ ನೋಡದೆ ರಾಷ್ಟ್ರದ ಸಮಸ್ಯೆಯೆಂದು ಪರಿಗಣಿಸಿ ಪ್ರತಿಯೊಬ್ಬ ನಾಗರಿಕರೂ ತಮ್ಮಿಂದಾದಷ್ಟು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ ಇಂಧನ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಪದ್ಧತಿಯಲ್ಲಿ ಕೂಡ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮ ಎಂದು ಶ್ರೀಗಳು ಸಲಹೆ ನೀಡಿದರು. ಬೇಯಿಸಿದ ಆಹಾರ ಸೇವನೆಯನ್ನು ಕಡಿಮೆ ಮಾಡಿ, ನೆನೆಸಿದ ಕಾಳುಗಳು ಹಾಗೂ ಹಸಿ ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ನೀರಿನಲ್ಲಿ ಕಾಳುಗಳನ್ನು ನೆನೆಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದರಿಂದ ಗ್ಯಾಸ್ ಬಳಕೆ ಕಡಿಮೆಯಾಗುವುದಲ್ಲದೆ, ದೇಹಕ್ಕೂ ಪೋಷಕಾಂಶಗಳು ದೊರೆಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಯುದ್ಧಕ್ಕೆ ಮಾತುಕತೆಯೇ ಪರಿಹಾರ

ವಿಶ್ವದ ನಾಯಕರು ಯುದ್ಧ ಮಾರ್ಗವನ್ನು ಬಿಟ್ಟು ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಯುದ್ಧ ಮುಂದುವರಿದರೆ ಅದರ ಪರಿಣಾಮ ವಿಶ್ವದ ಆರ್ಥಿಕತೆ ಹಾಗೂ ಸಾಮಾನ್ಯ ಜನರ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ ಎಂದು ಶ್ರೀಗಳು ಹೇಳಿದರು.

ಭಾರತದ ರಾಜಕೀಯ ನಾಯಕರು ಕೂಡ ದೇಶದಲ್ಲಿ ಇಂಧನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು.

ಭವಿಷ್ಯದಲ್ಲಿ ಇಂತಹ ಸಂಕಷ್ಟಗಳು ಎದುರಾಗದಂತೆ ದೀರ್ಘಕಾಲಿಕ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಜಾಗತಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಿದರೆ ಮಾತ್ರ ಇಂಧನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಶ್ರೀ ಸಿದ್ಧರಾಮ ಸ್ವಾಮೀಜಿ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande