
ನವದೆಹಲಿ, 13 ಮಾರ್ಚ್ (ಹಿ.ಸ.):
ಆ್ಯಂಕರ್:
ಕರ್ನಾಟಕದ ಎಫ್‌ಸಿವಿ ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಅವರು ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೊಯಲ್ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟು ತುರ್ತು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
2025ರ ಡಿಸೆಂಬರ್ 31ರಂದು ಸಂಸ್ಕರಿಸದ ತಂಬಾಕಿನ ಮೇಲೆ ಶೇ.40ರ ಜಿಎಸ್‌ಟಿ ವಿಧಿಸಲಾಗಿದ್ದರಿಂದ ಹಲವೆಡೆ ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ಜಿಎಸ್‌ಟಿ ನಿರ್ಧಾರವನ್ನು ಹಿಂತೆಗೆದುಕೊಳ್ಳಲಾದ ಬಳಿಕ ಹರಾಜುಗಳು ಮರುಪ್ರಾರಂಭವಾದರೂ, ತಯಾರಿತ ತಂಬಾಕು ಉತ್ಪನ್ನಗಳ ಮೇಲಿನ ಹೆಚ್ಚಿದ ಎಕ್ಸೈಸ್ ತೆರಿಗೆ ಮುಂದುವರಿದಿರುವುದರಿಂದ ಮಾರುಕಟ್ಟೆಯಲ್ಲಿ ವಿಶ್ವಾಸ ಕುಂದಿದ್ದು ರೈತರಿಗೆ ಸೂಕ್ತ ಬೆಲೆ ದೊರೆಯುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದು ಅವರು ಸಚಿವರಿಗೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬ್ರೈಟ್ ಗ್ರೇಡ್ ತಂಬಾಕಿನ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 45 ರಿಂದ 50 ರೂಪಾಯಿವರೆಗೆ ಕುಸಿದಿದೆ ಎಂದು ಸಂಸದರು ಗಮನ ಸೆಳೆದರು. ಪ್ರಮುಖ ಖರೀದಿದಾರ ಸಂಸ್ಥೆಯಾದ ಐಟಿಸಿ ಖರೀದಿ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಮಾರುಕಟ್ಟೆಯ ಸ್ಥಿರತೆಗೆ ಹೊಡೆತ ಬಿದ್ದಿದೆ ಎಂದು ವಿವರಿಸಿದರು.
ಇದರಿಂದಾಗಿ ಎಕ್ಸೈಸ್ ತೆರಿಗೆಯ ಪರಿಣಾಮವನ್ನು ಸಮಗ್ರವಾಗಿ ಪರಿಶೀಲಿಸಿ, ಭಾರತೀಯ ತಂಬಾಕು ಮಂಡಳಿ ಹಾಗೂ ಇತರ ಸಂಬಂಧಿತ ಹಿತಾಸಕ್ತಿದಾರರೊಂದಿಗೆ ಸಭೆ ನಡೆಸಿ ಅಗತ್ಯ ನೀತಿ ಪರಿಷ್ಕರಣೆಗಳನ್ನು ಕೈಗೊಳ್ಳುವ ಮೂಲಕ ಎಫ್‌ಸಿವಿ ತಂಬಾಕು ರೈತರ ಹಿತಾಸಕ್ತಿಯನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರಕ್ಕೆ ಸಂಸದ ಶ್ರೇಯಸ್ ಪಟೇಲ್ ಮನವಿ ಮಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa