
ಬಾಗಲಕೋಟೆ, 13 ಮಾರ್ಚ್ (ಹಿ.ಸ.)
ಆ್ಯಂಕರ್ : ಜಾಗತಿಕ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ಅಭಾವವನ್ನು ಸಮರ್ಥವಾಗಿ ಎದುರಿಸಲು, ಸ್ವದೇಶಿ ತಂತ್ರಜ್ಞಾನದ ‘ಎಥೆನಾಲ್ ಸ್ಟೌವ್’ ಬಳಕೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು ಎಂದು ಎಂ.ಆರ್.ಎನ್ ಉದ್ಯಮ ಸಮೂಹದ ಸಂಸ್ಥಾಪಕರು, ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಮುರುಗೇಶ ನಿರಾಣಿ ಮಹತ್ವದ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಎಥೆನಾಲ್ ಸ್ಟೌವ್ಗಳು ಹೊಸ ಆವಿಷ್ಕಾರವಲ್ಲ. ಇವುಗಳನ್ನು 2004ರಲ್ಲಿಯೇ ಅಭಿವೃದ್ಧಿಪಡಿಸಲಾಗಿದ್ದು, ಸೀಮೆಎಣ್ಣೆ ಒಲೆಗಳ ಮಾದರಿಯಲ್ಲೇ ಸರಳ ಹಾಗೂ ಬಳಕೆದಾರ ಸ್ನೇಹಿ ವಿನ್ಯಾಸ ಹೊಂದಿವೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಸುಮಾರು 24 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇದರ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಚ್ಚದ ದೃಷ್ಟಿಯಿಂದ ಎಲ್ಪಿಜಿಗೆ ಹೋಲಿಸಿದರೆ ಎಥೆನಾಲ್ ಎಣ್ಣೆ ಆಧಾರಿತ ಇಂಧನ ಸ್ವಲ್ಪ ದುಬಾರಿ ಎನಿಸಿದರೂ, ಇದು ಸಂಪೂರ್ಣವಾಗಿ ಪರಿಸರ ಸ್ನೇಹಿ ಮತ್ತು ಸುರಕ್ಷಿತ ಇಂಧನವಾಗಿದೆ. ಯಾವುದೇ ದೊಡ್ಡ ಅಪಾಯಗಳಿಗೆ ಅವಕಾಶವಿಲ್ಲದ ಈ ವಿಧಾನವು ಭವಿಷ್ಯದ ಸುಸ್ಥಿರ ಇಂಧನ ಬಳಕೆಗೆ ಉತ್ತಮ ಮಾರ್ಗವಾಗಲಿದೆ ಎಂದು ಅವರು ವಿವರಿಸಿದ್ದಾರೆ.
ಎಥೆನಾಲ್ ಉತ್ಪಾದನೆಗೆ ಕಬ್ಬು, ಮೆಕ್ಕೆಜೋಳ, ಕಳಪೆ ಗುಣಮಟ್ಟದ ಅಕ್ಕಿ, ಹುಲ್ಲು ಹಾಗೂ ಸಿಹಿ ಜೋಳದಂತಹ ಕೃಷಿ ಉತ್ಪನ್ನಗಳು ಮತ್ತು ತ್ಯಾಜ್ಯಗಳನ್ನು ಬಳಸಬಹುದು. ಗೃಹಬಳಕೆಯ ಇಂಧನವಾಗಿ ಎಥೆನಾಲ್ಗೆ ಹೆಚ್ಚಿನ ಉತ್ತೇಜನ ನೀಡಿದರೆ ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗುವುದರೊಂದಿಗೆ ಅವರ ಆದಾಯವೂ ಹೆಚ್ಚಾಗಲಿದೆ. ಇದು ಪ್ರಧಾನಮಂತ್ರಿ ಘೋಷಿಸಿರುವ ಆತ್ಮ ನಿರ್ಭರ್ ಭಾರತ ಸಂಕಲ್ಪಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಈಗಾಗಲೇ ಎಥೆನಾಲ್ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಈ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಲು ಸರ್ಕಾರವು ಮೊದಲ ಹಂತದಲ್ಲಿ ಹೋಟೆಲ್ಗಳು, ವಸತಿ ನಿಲಯಗಳು ಹಾಗೂ ಲಾಡ್ಜ್ಗಳಲ್ಲಿ ಎಥೆನಾಲ್ ಸ್ಟೌವ್ ಬಳಕೆಯನ್ನು ಉತ್ತೇಜಿಸಬೇಕು. ವಿಶ್ವದ ಅನೇಕ ಮುಂದುವರಿದ ರಾಷ್ಟ್ರಗಳು ಈಗಾಗಲೇ ಈ ಪದ್ಧತಿಯನ್ನು ಅನುಸರಿಸುತ್ತಿದ್ದು, ಭಾರತದಲ್ಲಿಯೂ ಈ ಪರ್ಯಾಯ ಇಂಧನ ವ್ಯವಸ್ಥೆ ಶೀಘ್ರ ಜಾರಿಯಾಗಬೇಕು ಎಂದು ಡಾ. ಮುರುಗೇಶ್ ಆರ್ ನಿರಾಣಿ ಅವರು ಆಶಯ ವ್ಯಕ್ತಪಡಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande