ಕೊಪ್ಪಳ: ಎಚ್ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ
ಕೊಪ್ಪಳ, 13 ಮಾರ್ಚ್ (ಹಿ.ಸ.): ಆ್ಯಂಕರ್ : ಹೆಣ್ಣು ಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲೆಯಲ್ಲಿ 14 ವರ್ಷದ ಎಲ್ಲಾ ಅರ್ಹ ಹೆಣ್ಣುಮಕ್ಕಳಿಗೆ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್ಪಿವಿ ಲಸಿಕೆಯನ್ನು ನೀಡಲು ಎಚ್ಪಿವಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲ
ಕೊಪ್ಪಳ: ಎಚ್ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ


ಕೊಪ್ಪಳ, 13 ಮಾರ್ಚ್ (ಹಿ.ಸ.):

ಆ್ಯಂಕರ್ : ಹೆಣ್ಣು ಮಕ್ಕಳಲ್ಲಿ ಕಂಡುಬರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲೆಯಲ್ಲಿ 14 ವರ್ಷದ ಎಲ್ಲಾ ಅರ್ಹ ಹೆಣ್ಣುಮಕ್ಕಳಿಗೆ ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್ಪಿವಿ ಲಸಿಕೆಯನ್ನು ನೀಡಲು ಎಚ್ಪಿವಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ತಿಳಿಸಿದರು.

ಇದು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸಾರ್ವಜನಿಕರ ಆರೋಗ್ಯದ ಒಂದು ಮಹತ್ವಪೂರ್ಣ ಕಾರ್ಯಕ್ರಮವಾಗಿದೆ. ಗರ್ಭಕಂಠದ ಕ್ಯಾನ್ಸರ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ ಎಚ್ಪಿವಿ ನಿಂದ ಉಂಟಾಗುತ್ತದೆ. ಸಮಾರು ಶೇ.99.7 ಗರ್ಭಕಂಠದ ಕ್ಯಾನ್ಸರ್ಗೆ ಎಚ್ಪಿವಿ ಸೋಂಕು ಕಾರಣವಾಗಿದೆ. ಭಾರತದಲ್ಲಿ ಪ್ರತಿ ವರ್ಷ ಸುಮಾರು 79,103 ಹೊಸ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಅಂದಾಜು 34,805 ಮಹಿಳೆಯರು ಪ್ರತಿ ವರ್ಷ ಈ ಕ್ಯಾನ್ಸರ್ನಿಂದ ಮರಣ ಹೊಂದುತ್ತಿದ್ದಾರೆ.

ಈ ಖಾಯಿಲೆ ತಡೆಗಟ್ಟಲು ಏಕೈಕ ಮಾರ್ಗ ಎಚ್ಪಿವಿ ಲಸಿಕೆ ಪಡೆಯುವುದಾಗಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ 14 ವರ್ಷದ ವಯಸ್ಸಿನ ಹೆಣ್ಣುಮಕ್ಕಳಿಗೆ ಎಚ್ಪಿವಿ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಅಭಿಯಾನದಡಿ ನಮ್ಮ ಜಿಲ್ಲೆಯಾದ್ಯಂತ 14 ವರ್ಷದ ವಯಸ್ಸಿನ ಎಲ್ಲಾ ಅರ್ಹ ಹೆಣ್ಣುಮಕ್ಕಳಿಗೆ ಆಯ್ದ ಸರ್ಕಾರಿ ಆರೋಗ್ಯ ಸಂಸ್ಥೆಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕಾ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಂದು ಡೋಸ್ ಗಾರ್ಡಸಿಲ್-4 ಎಚ್ಪಿವಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಎಚ್ಪಿವಿ ಲಸಿಕಾ ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲೆಯ ಎಲ್ಲಾ ಹಂತದಲ್ಲಿ ಸಂಬಂಧಪಟ್ಟ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಿ, ಯಶಸ್ವಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಈ ಎಚ್ಪಿವಿ ಲಸಿಕೆ ಮಹತ್ವದ್ದಾಗಿದೆ. ಈ ಕ್ಯಾನ್ಸರ್ ಮುಕ್ತ ನಾಳೆಗಾಗಿ ನಾವೆಲ್ಲರೂ ಎಚ್ಪಿವಿ ಲಸಿಕೆಯನ್ನು ಅರ್ಹ ಬಾಲಕಿಯರಿಗೆ ನೀಡಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬೇಕು. ಇದು ಸುರಕ್ಷಿತ ಲಸಿಕೆಯಾಗಿದ್ದು, ಯಾವುದೇ ತೊಂದರೆ ಉಂಟುಮಾಡುವುದಿಲ್ಲ.

ಕೊಪ್ಪಳ ಜಿಲ್ಲಾ ಆಸ್ಪತ್ರೆ(ಎಂ.ಸಿ.ಎಚ್), ಕೊಪ್ಪಳ ತಾಲ್ಲೂಕಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಪ್ಪಳ, ಸಮುದಾಯ ಆರೋಗ್ಯ ಕೇಂದ್ರಗಳಾದ ಮುನಿರಾಬಾದ್, ಹಿರೇಸಿಂದೋಗಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಇರಕಲ್ಗಡಾ, ಭಾಗ್ಯನಗರ, ಕೂಕನಪಳ್ಳಿ, ಗಿಣಿಗೇರಾ, ಹಿಟ್ನಾಳ, ಹುಲಗಿ, ಬೆಟಗೇರಾ, ಗಂಗಾವತಿ ಎಂ.ಸಿ.ಎಚ್.ಆಸ್ಪತ್ರೆ, ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಾದ ಶ್ರೀರಾಮನಗರ, ಕಾರಟಗಿ, ಕನಕಗಿರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ವೆಂಕಟಗಿರಿ, ನವಲಿ, ಹೊಸಕೇರಾ, ಯಲಬುರ್ಗಾದ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರಗಳಾದ ಕುಕನೂರು, ಮಂಗಳೂರು, ಹಿರೇವಂಕಲಕುಂಟಾ, ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಬೇವೂರು, ಚಿಕೇನಕೊಪ್ಪ, ಇಟಗಿ, ಮುಧೋಳ, ತಳಕಲ್ನ ಸರ್ಕಾರಿ ಹೆರಿಗೆ ಆಸ್ಪತ್ರೆ, ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ಹಿರೇಮನ್ನಾಪುರ, ಹೂಲಗೇರಾ, ಮಾಲಗಿತ್ತಿ, ದೋಟಿಹಾಳ, ಮುದೇನೂರು, ಹನುಮಸಾಗರ ಹಾಗೂ ಚಳಗೇರಾಗಳಲ್ಲಿ ಎಚ್ಪಿವಿ ಲಸಿಕೆ ಹಾಕಲಾಗುತ್ತದೆ.

ಆದ್ದರಿಂದ, ಸಾರ್ವಜನಿಕರು ತಮ್ಮ ಕುಟುಂಬದಲ್ಲಿರುವ 14 ವರ್ಷದ ಹೆಣ್ಣುಮಕ್ಕಳನ್ನು ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಎಚ್ಪಿವಿ ಲಸಿಕೆ ಹಾಕಿಸಿ, ಹೆಣ್ಣಮಕ್ಕಳ ಆರೋಗ್ಯ ರಕ್ಷಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ಹಾಗೂ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ, ಮಾಹಿತಿಯನ್ನು ಪಡೆದುಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande