
ವಿಜಯಪುರ, 13 ಮಾರ್ಚ್ (ಹಿ.ಸ.)
ಆ್ಯಂಕರ್ : 2024–25ನೇ ಸಾಲಿನ ಹವಾಮಾನ ಆಧಾರಿತ ವಿಮಾ ಯೋಜನೆಯಡಿ ವಿಮೆ ಕಂತು ಪಾವತಿಸಿದ್ದರೂ ಪರಿಹಾರದಿಂದ ವಂಚಿತರಾಗಿರುವ ಜಿಲ್ಲೆಯ 931 ದ್ರಾಕ್ಷಿ ಬೆಳೆಗಾರರಿಗೆ ತಕ್ಷಣವೇ ವಿಮಾ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರ ನೇತೃತ್ವದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಕಳೆದ ಸಾಲಿನಲ್ಲಿ ಅತಿವೃಷ್ಟಿ, ಅನಾವೃಷ್ಟಿ ಹಾಗೂ ವಿವಿಧ ರೋಗಬಾಧೆಯಿಂದ ದ್ರಾಕ್ಷಿ ಬೆಳೆಗಳಿಗೆ ದೊಡ್ಡ ಪ್ರಮಾಣದ ಹಾನಿಯಾಗಿದೆ. ಜಿಲ್ಲೆಯಾದ್ಯಂತ 15 ಸಾವಿರಕ್ಕೂ ಹೆಚ್ಚು ದ್ರಾಕ್ಷಿ ಬೆಳೆಗಾರರು ವಿಮೆ ಮಾಡಿಸಿದ್ದರು. ಆದರೆ ನಿಯಮಾನುಸಾರ ವಿಮೆ ಕಂತು ಪಾವತಿಸಿದ್ದರೂ “ನಕಲಿ ಕ್ಷೇತ್ರ” ಎಂಬ ಕಾರಣ ನೀಡಿ ವಿಮಾ ಕಂಪನಿಗಳು ಜಿಲ್ಲೆಯ 931 ಬೆಳೆಗಾರರಿಗೆ, ವಿಶೇಷವಾಗಿ ಬಬಲೇಶ್ವರ ತಾಲೂಕಿನ ರೈತರಿಗೆ, ಪರಿಹಾರ ನೀಡದೆ ಸತಾಯಿಸುತ್ತಿವೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ವಿಮಾ ಕಂಪನಿಯೊಂದಿಗೆ ತಕ್ಷಣ ಚರ್ಚೆ ನಡೆಸಿ ಬಾಕಿ ಉಳಿದಿರುವ ಎಲ್ಲಾ ಅರ್ಹ ದ್ರಾಕ್ಷಿ ಬೆಳೆಗಾರರ ಖಾತೆಗಳಿಗೆ ವಿಮಾ ಪರಿಹಾರವನ್ನು ಶೀಘ್ರ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇಲ್ಲವಾದಲ್ಲಿ ಪರಿಹಾರ ವಂಚಿತ ರೈತರೊಂದಿಗೆ ಸೇರಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಪಕ್ಷದ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಉಮೇಶ ಕೊಳಕೂರ, ಚಿದಾನಂದ ಚಲವಾದಿ, ಸಂಗನಗೌಡ ಚಿಕ್ಕೊಂಡ, ಅಬ್ದುಲರಜಾಕ ವಾಲೀಕಾರ, ಜಗದೀಶ ಪಂಪಣ್ಣವರ, ಸಿದ್ದಗೊಂಡ ಬಿರಾದಾರ, ಮಲ್ಲಿಕಾರ್ಜುನ ದೇವರಮನಿ, ಮಲ್ಲು ಕನ್ನೂರ, ಸ್ವಪ್ನಾ ಕಣಮುಚನಾಳ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತ ಆಗ್ರಹಿಸಿದರು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande