ಜಮಖಂಡಿಯಲ್ಲಿ ಅರಣ್ಯಕ್ಕೆ ಬೆಂಕಿ : 2 ಕಿ.ಮೀ ವ್ಯಾಪ್ತಿ ಸುಟ್ಟ ಗಿಡ ಮರಗಳು
ಬಾಗಲಕೋಟೆ, 13 ಮಾರ್ಚ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ರಾಮೇಶ್ವರ ದೇವಸ್ಥಾನದ ಹಿಂದಿನ ಗುಡ್ಡ ಪ್ರದೇಶದಲ್ಲಿ ಅರಣ್ಯ ಬೆಂಕಿ ಕಾಣಿಸಿಕೊಂಡು ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಡು ಸುಟ್ಟು ಕರಕಲಾದ ಘಟನೆ ನಡೆದಿದೆ. ಗುಡ್ಡ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊ
Fire forest


ಬಾಗಲಕೋಟೆ, 13 ಮಾರ್ಚ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಜಮಖಂಡಿ ಪಟ್ಟಣದ ರಾಮೇಶ್ವರ ದೇವಸ್ಥಾನದ ಹಿಂದಿನ ಗುಡ್ಡ ಪ್ರದೇಶದಲ್ಲಿ ಅರಣ್ಯ ಬೆಂಕಿ ಕಾಣಿಸಿಕೊಂಡು ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಡು ಸುಟ್ಟು ಕರಕಲಾದ ಘಟನೆ ನಡೆದಿದೆ.

ಗುಡ್ಡ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಗಾಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಕವಾಗಿ ಹರಡಿತು. ಒಣಗಿದ ಗಿಡಗಂಟಿಗಳು, ಹುಲ್ಲು ಹಾಗೂ ಸಣ್ಣ ಮರಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಜ್ವಾಲೆಗಳು ಎತ್ತರಕ್ಕೆ ಎದ್ದಿರುವುದನ್ನು ಕಂಡು ಸ್ಥಳೀಯರು ಆತಂಕಗೊಂಡರು. ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಸ್ಥಳೀಯ ಯುವಕರು ಹಾಗೂ ಗ್ರಾಮಸ್ಥರೂ ಸಹ ಬೆಂಕಿ ನಂದಿಸುವ ಕಾರ್ಯದಲ್ಲಿ ಕೈಜೋಡಿಸಿದರು. ಹಲವು ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

ಬೆಂಕಿಯಿಂದ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಗಿಡಗಂಟಿಗಳು ಹಾಗೂ ಕಾಡು ಪ್ರದೇಶ ಸುಟ್ಟು ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಕೆಲವರು ನಿರ್ಲಕ್ಷ್ಯದಿಂದ ಬೆಂಕಿ ಹಚ್ಚಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande