
ಗದಗ, 13 ಮಾರ್ಚ್ (ಹಿ.ಸ.)
ಆ್ಯಂಕರ್:- ಗದಗ: ಗದಗ–ಬೆಟಗೇರಿ ನಗರದಲ್ಲಿ ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗದಗ ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂಘಟನೆಯ ಪದಾಧಿಕಾರಿಗಳು, ಗೃಹ ಬಳಕೆ ಸಿಲಿಂಡರ್ಗಳ ಕೊರತೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ಗ್ಯಾಸ್ ಏಜೆನ್ಸಿಗಳು ಅನಧಿಕೃತವಾಗಿ ಕಾಳುಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿದರು. ಇದರಿಂದ ಸಾಮಾನ್ಯ ಜನತೆ, ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಭಾರೀ ಸಂಕಷ್ಟ ಅನುಭವಿಸುತ್ತಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ, ದೇಶದ ವಿವಿಧ ಭಾಗಗಳಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಜನರು ಗ್ಯಾಸ್ ಖರೀದಿಗಾಗಿ ಮುಗಿಬೀಳುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ಯಾಸ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಕಂಪನಿಗಳಿಗೆ ಹೆಚ್ಚಿನ ಉತ್ಪಾದನೆ ಮಾಡುವಂತೆ ಸೂಚನೆ ನೀಡಿದರೂ ಸಹ, ಕೆಲವೆಡೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿದರು.
ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ಆಗುವ ಎಲ್ಪಿಜಿ ಪೂರೈಕೆಯಲ್ಲಿ ತೊಂದರೆ ಉಂಟಾದ ಹಿನ್ನೆಲೆಯಲ್ಲಿ ಅನೇಕ ಕಡೆಗಳಲ್ಲಿ ಸಿಲಿಂಡರ್ಗಳ ಕೊರತೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡ ಜನರು ಹೆಚ್ಚಿನ ಪ್ರಮಾಣದಲ್ಲಿ ಸಿಲಿಂಡರ್ ಖರೀದಿಸಲು ಮುಂದಾಗುತ್ತಿದ್ದಾರೆ. ದೇಶದ ಹಲವೆಡೆ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ಹಿಡಿದು ಜನರು ಸಾಲಿನಲ್ಲಿ ನಿಂತು ಹೊಸ ಸಿಲಿಂಡರ್ಗಾಗಿ ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ ಎಂದು ಅವರು ತಿಳಿಸಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲೇ ಗದಗ ನಗರದ ಬೆಟಗೇರಿ ಭಾಗದಲ್ಲಿರುವ ವಸ್ತ್ರದ ಭಾರತ ಗ್ಯಾಸ್ ಏಜೆನ್ಸಿ ಗ್ರಾಹಕರ ಹೆಸರಿನಲ್ಲಿ ಬಂದಿರುವ ಗೃಹ ಬಳಕೆಯ ಸಿಲಿಂಡರ್ಗಳನ್ನು ಕಾನೂನುಬಾಹಿರವಾಗಿ ಗ್ಯಾಸ್ ತುಂಬುವ ಅಂಗಡಿಗಳಿಗೆ ಹೆಚ್ಚಿನ ದರಕ್ಕೆ ಕಾಳುಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ ಎಂದು ಹೇಳಿದರು.
ಇದರಿಂದ ಸಾಮಾನ್ಯ ಗ್ರಾಹಕರು ಸಿಲಿಂಡರ್ ಪಡೆಯಲು ಸಾಧ್ಯವಾಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಮನೆ ಮನೆಗೆ ಗ್ಯಾಸ್ ಪೂರೈಸುವ ಸಿಬ್ಬಂದಿಗಳು ಕೂಡಾ ಗ್ರಾಹಕರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಸರ್ಕಾರ ನಿಗದಿ ಮಾಡಿದ ದರದಲ್ಲಿ ಸಿಲಿಂಡರ್ ಸಿಗಬೇಕಾದರೂ, ಕೆಲವು ಏಜೆನ್ಸಿಗಳು ಗ್ರಾಹಕರನ್ನು ಮೋಸಗೊಳಿಸಿ ಕಾಳುಸಂತೆಯಲ್ಲಿ ಮಾರಾಟ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಆದ್ದರಿಂದ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಸಂಬಂಧಿಸಿದ ಗ್ಯಾಸ್ ಏಜೆನ್ಸಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಕಾಳುಸಂತೆ ಮಾರಾಟ ನಡೆಸುತ್ತಿರುವ ಏಜೆನ್ಸಿಗಳ ಪರವಾನಗಿಯನ್ನು ರದ್ದುಗೊಳಿಸಬೇಕು ಹಾಗೂ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಲ್ಲಿ ಆಗ್ರಹಿಸಿದರು.
ಈ ವೇಳೆ ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಅಧ್ಯಕ್ಷೆ ಪರವೀನ್ಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP