
ಬೆಂಗಳೂರು, 12 ಮಾರ್ಚ್ (ಹಿ.ಸ.):
ಆ್ಯಂಕರ್:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೆ ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ಸಾಧ್ಯವಿಲ್ಲ ಎಂದು ಪ್ರತ ಪಕ್ಷದ ನಾಯಕ ಆರ್.ಅಶೋಕ ತೀವ್ರ ಟೀಕೆ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ವಾಗ್ದಾಳಿ ನಡೆಸಿರುವ ಅವರು, ಆರೋಗ್ಯ ಇಲಾಖೆಯಲ್ಲಿ ದಿನದಿಂದ ದಿನಕ್ಕೆ ಹೊಸ ಎಡವಟ್ಟುಗಳು ಹೊರಬರುತ್ತಿದ್ದು, ಇದೀಗ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೆಳದರ್ಜೆಗೆ ಇಳಿಸುವ ನಿರ್ಧಾರವು ಆತಂಕ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಏಕಾಏಕಿ ವರ್ಗಾವಣೆ ಮಾಡುವ ಕ್ರಮ ಜನರಿಗೆ ತೀವ್ರ ತೊಂದರೆ ಉಂಟುಮಾಡಲಿದೆ ಎಂದು ಅಶೋಕ್ ಹೇಳಿದ್ದಾರೆ. ಆರೋಗ್ಯ ಸೇವೆಗಾಗಿ ಈ ಕೇಂದ್ರಗಳಿಗೆ ದಿನನಿತ್ಯ ಬರುತ್ತಿರುವ ನೂರಾರು ಹೊರರೋಗಿಗಳ ಪರಿಸ್ಥಿತಿ ಏನು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಎಂದಿದ್ದಾರೆ.
ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ, ಈಗ ಸಮುದಾಯ ಆರೋಗ್ಯ ಕೇಂದ್ರಗಳಿಂದ ವೈದ್ಯರನ್ನು ವರ್ಗಾವಣೆ ಮಾಡುವ ನಿರ್ಧಾರಕ್ಕೆ ಮುಂದಾಗಿದೆ ಎಂದು ಅಶೋಕ್ ಆರೋಪಿಸಿದರು.
ಈ ಕ್ರಮವು ಸರ್ಕಾರದ ಆರ್ಥಿಕ ಹಾಗೂ ಆಡಳಿತಾತ್ಮಕ ದೌರ್ಬಲ್ಯವನ್ನು ತೋರಿಸುವ ಮತ್ತೊಂದು ಉದಾಹರಣೆ ಎಂದು ಅವರು ಕಿಡಿಕಾರಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa