ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮ:ಡಾ. ಮೀನಾ ಚಂದಾವರಕರ
ವಿಜಯಪುರ, 12 ಮಾರ್ಚ್ (ಹಿ.ಸ.) ಆ್ಯಂಕರ್ : ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮವಾಗಿದ್ದು, ಇಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ಅಧ್ಯಕ್ಷೆ ಡಾ
Women's university


ವಿಜಯಪುರ, 12 ಮಾರ್ಚ್ (ಹಿ.ಸ.)

ಆ್ಯಂಕರ್ : ಮಹಿಳೆ ಒಂದು ವಿಶ್ವವಿದ್ಯಾನಿಲಯಕ್ಕೆ ಸಮವಾಗಿದ್ದು, ಇಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ ಅಧ್ಯಕ್ಷೆ ಡಾ. ಮೀನಾ ಚಂದಾವರಕರ ಹೇಳಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ–2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊಟ್ಟರೆ ಪಡೆಯಬಹುದು’ ಎಂಬ ತತ್ವದೊಂದಿಗೆ ಕುಟುಂಬ ಮತ್ತು ಸಮಾಜದಲ್ಲಿ ಪುರುಷರ ಸಹಕಾರದಿಂದ ಮಹಿಳೆಯರು ಇಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಳ್ಳೆಯತನವೆಂಬುದು ಎಂದಿಗೂ ವಿಫಲವಾಗದ ಹೂಡಿಕೆ. ಪ್ರಾರ್ಥನೆ ಮಾಡುವ ಕೈಗಳಿಗಿಂತ ಸಹಾಯ ಮಾಡುವ ಕೈಗಳು ಮಹತ್ತರವಾದವು ಎಂದು ಅವರು ಹೇಳಿದರು.

ಜೀವನದಲ್ಲಿ ತೃಪ್ತಿ, ಸಂತೋಷ ಹಾಗೂ ಆಧ್ಯಾತ್ಮಿಕ ಶಕ್ತಿ ಅಗತ್ಯವಾಗಿದ್ದು, ‘ಪ್ರತಿ ದಿನವೂ ಮಹಿಳಾ ದಿನವೇ’ ಎಂಬ ಮನೋಭಾವದಿಂದ ಬದುಕಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ–2025 ಪುರಸ್ಕೃತ ಪ್ರಕಾಶ ಗೌಡರ ಮಾತನಾಡಿ, ವಿಜ್ಞಾನದ ಅಭಿವೃದ್ಧಿಯೊಂದಿಗೆ ಸಮಾಜದಲ್ಲಿಯೂ ಹಲವು ಬದಲಾವಣೆಗಳು ಸಂಭವಿಸುತ್ತಿವೆ. ಇಂದು ನಾವು ಕೃತಕ ಬುದ್ಧಿಮತ್ತೆ ಯುಗಕ್ಕೆ ಕಾಲಿಟ್ಟಿದ್ದೇವೆ. ಇದರಿಂದ ಮಾನವರು ತಮ್ಮ ಕೆಲಸವನ್ನು ಕಳೆದುಕೊಳ್ಳುವುದಿಲ್ಲ. ಪ್ರಕೃತಿ ಇರುವವರೆಗೆ ಮಾನವ ಅಭಿವೃದ್ಧಿ ಮುಂದುವರಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿಂಡಿಕೇಟ್ ಸದಸ್ಯೆ ಡಾ. ಮಾಧುರಿ ಡಿ. ಬಿರಾದಾರ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ಹಾಗೂ ಸಂಶೋಧನೆ ಮಾಡುವ ಅವಕಾಶಗಳು ಕಡಿಮೆ ಇದ್ದರೂ, ಇಂದಿನ ದಿನಗಳಲ್ಲಿ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದ್ದಾರೆ. ತಂತ್ರಜ್ಞಾನ, ಅಂತರಿಕ್ಷ ವಿಜ್ಞಾನ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿಜ್ಞಾನ ದಿನಾಚರಣೆ ಕೇವಲ ಒಂದು ದಿನದ ಸಂಭ್ರಮವಾಗದೇ, ನಮ್ಮ ದಿನನಿತ್ಯದ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ಅನ್ವೇಷಿಸುವ ಹಂಬಲ ಸದಾ ಜೀವಂತವಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿ, ಮಹಿಳೆಯರನ್ನು ಹುರಿದುಂಬಿಸುವುದು ಅತ್ಯಂತ ಅಗತ್ಯ. ಅವರಿಗೆ ಹೆಚ್ಚಿನ ಅವಕಾಶಗಳನ್ನು ನೀಡಿದಾಗ ವಿವಿಧ ಹುದ್ದೆಗಳಲ್ಲಿ ಅವರು ಸಾಧನೆ ಮಾಡಬಹುದು. ಸುದಾ ಮೂರ್ತಿ ಅವರಂತಹ ಮಹಿಳೆಯರು ಸಮಾಜಕ್ಕೆ ಸ್ಪೂರ್ತಿದಾಯಕ ವ್ಯಕ್ತಿಗಳಾಗಿದ್ದಾರೆ ಎಂದು ಉಲ್ಲೇಖಿಸಿದರು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಹಿಳೆಯರು ಹೆಮ್ಮೆಯ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ ವಿದ್ಯಾರ್ಥಿನಿಯರಿಗೆ ಅತಿಥಿಗಳಿಂದ ಪ್ರಶಸ್ತಿ ಪತ್ರ ವಿತರಿಸಲಾಯಿತು. ಡಾ. ನಟರಾಜ ದುರ್ಗಣ್ಣವರ ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬದ ಸದಸ್ಯ ಕಾರ್ಯದರ್ಶಿ ಪ್ರೊ. ಲಕ್ಷ್ಮೀದೇವಿ ವೈ. ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಅಜೀಜ್ ಮಕಾಂದಾರ, ಸಿಂಡಿಕೇಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande