
ಬಾಗಲಕೋಟೆ, 12 ಮಾರ್ಚ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ನಗರದಲ್ಲಿ ಚತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆ ವಿಚಾರ ರಾಜಕೀಯ ಚರ್ಚೆಗೆ ಗ್ರಾಸವಾಗಿದ್ದು, ಅಸ್ಮಿತೆಯ ವಿಚಾರಕ್ಕಿಂತ ‘ಉಪ ಚುನಾವಣಾ’ ಲಾಭಕ್ಕೆ ಪಡೆಯುವ ರಾಜಕೀಯ ಪೈಪೋಟಿಯೇ ಹೆಚ್ಚು ಕಾಣಿಸುತ್ತಿದೆ ಎಂಬ ಮಾತುಗಳು ಜಿಲ್ಲೆಯ ಜನರಲ್ಲಿ ಕೇಳಿ ಬರುತ್ತಿವೆ.
ಇತ್ತೀಚೆಗೆ ನಡೆದ ಬೆಳವಣಿಗೆಗಳು, ಪ್ರತಿಭಟನೆಗಳು ಹಾಗೂ ಪೊಲೀಸ್ ಲಾಠಿ ಪ್ರಹಾರಗಳ ನಡುವೆಯೇ ಈ ವಿಷಯ ಮತ್ತಷ್ಟು ರಾಜಕೀಯ ತೀವ್ರತೆಯನ್ನು ಪಡೆದಿದೆ. ಶಿವಾಜಿ ಮಹಾರಾಜರು ಮರಾಠ ಸಮುದಾಯದ ಗೌರವದ ಸಂಕೇತವಾಗಿರುವ ಹಿನ್ನೆಲೆಯಲ್ಲಿ, ಪ್ರತಿಮೆ ಸ್ಥಾಪನೆಗೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ನಾಯಕರು ಆಗ್ರಹ ವ್ಯಕ್ತಪಡಿಸುತ್ತಾ ಬಂದಿದ್ದರು.
ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಯಾರಿಗೆ ಶ್ರೇಯಸ್ಸು ಸಿಗಬೇಕು ಎಂಬುದರ ಬಗ್ಗೆ ರಾಜಕೀಯ ಪಕ್ಷಗಳ ನಡುವೆ ಪೈಪೋಟಿ ಜೋರಾಗಿಯೇ ನಡೆಯುತ್ತಾ ಬಂದಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಈ ವಿಷಯದಲ್ಲಿ ಪರೋಕ್ಷ ಆರೋಪ–ಪ್ರತ್ಯಾರೋಪಗಳು ನಡೆಯುತ್ತಿದ್ದು, ಪ್ರತಿಮೆ ಸ್ಥಾಪನೆ ವಿಚಾರ ರಾಜಕೀಯ ವೇದಿಕೆಯಾಗುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕೆಲವರು ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದರೆ, ಇನ್ನು ಕೆಲವರು ಜನಾಭಿಪ್ರಾಯಕ್ಕೆ ಸ್ಪಂದಿಸುವ ಪ್ರಯತ್ನ ಮಾತ್ರ ಇದಾಗಿದೆ ಎಂದು ಹೇಳುತ್ತಿದ್ದಾರೆ.
ಬಾಗಲಕೋಟೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿಚಾರ ಈಗ ಅಸ್ಮಿತೆ, ರಾಜಕೀಯ ಪ್ರಭಾವ ಹಾಗೂ ಕ್ರೆಡಿಟ್ ರಾಜಕಾರಣದ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿರುವುದು ಸ್ಪಷ್ಟವಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande