
ಕೊಪ್ಪಳ, 12 ಮಾರ್ಚ್ (ಹಿ.ಸ.)
ಆ್ಯಂಕರ್: ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮಹಿಳೆಯರು ಬಹಳಷ್ಟು ಉಪಯೋಗ ಪಡೆದಿದ್ದು ಅವರ ಜೀವನಮಟ್ಟದಲ್ಲಿ ಸುಧಾರಣೆಯಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು.
ಅವರು ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಜರುಗಿದ ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರ್ಕಾರವು ಮಹಿಳೆಯರ, ಬಡವರ, ಯುವಕರ ಏಳಿಗೆಗಾಗಿ ಮತ್ತು ಅವರ ಜೀವನ ಮಟ್ಟ ಸುಧಾರಿಸಲು ಸರ್ಕಾರದ ಮಟ್ಟದಲ್ಲಿ ಅನೇಕ ವಿಚಾರಗಳನ್ನು ಒಗ್ಗೂಡಿಸಿಕೊಂಡು ಆ ಮೂಲಕ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಭರವಸೆ ನೀಡಿ ಅಧಿಕಾರಕ್ಕೆಬಂದ ಕೆಲವೇ ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ, ಇದೊಂದು ದೊಡ್ಡ ಕಾರ್ಯ, ಸಮಾಜದಲ್ಲಿ ಮಹಿಳೆಯ ಶಕ್ತಿ ಪುರಿಷನಿಗಿಂತ ದೊಡ್ಡದು, ಪ್ರತಿಯೊಂದು ಕುಟುಂಬವು ಸುಗಮವಾಗಿ ನಡೆಯುತ್ತಿದೆ ಎಂದರೆ ಅಲ್ಲಿ ಮಹಿಳೆಯ ಪಾತ್ರ ಪ್ರಮುಖವಾದದು. ಪ್ರತಿ ಮನೆಯಲ್ಲಿ ಮಹಿಳೆಯರನ್ನು ಗೌರವಿಸುವ ಮನೋಭಾವ ಎಲ್ಲರೂ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಮಹಿಳೆಗೆ ಉನ್ನತ ಸ್ಥಾನಮಾನಗಳು ದೊರೆಯುವದರಲ್ಲಿ ಸಂದೇಹವಿಲ್ಲ ಎಂದರು. ಅಧ್ಯಕ್ಷತೆವಹಿಸಿದ್ದ ತಾಲೂಕ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಾಲಚಂದ್ರನ್, ಗ್ಯಾರಂಟಿಗಳ ಪ್ರಯೋಜನೆ ಮತ್ತು ಅರ್ಹತೆಗಳ ಕುರಿತು ನಗರ ಹಾಗು ಗ್ರಾಮೀಣ ಮಟ್ಟದಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಹಳಷ್ಟು ಕುಟುಂಬಗಳು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ಗೃಹಲಕ್ಷ್ಮೀ ಹಣದಿಂದ ಮಹಿಳೆಯರು ಆರ್ಥಿಕ ಚಟುವಟಿಕೆ, ನೀರಾವರಿಗಾಗಿ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಯಿಸಿದ್ದಾರೆ. ಜೆರಾಕ್ಸ ಅಂಗಡಿ, ಪಾನಶಾಪ್, ಹೋಟೆಲ್ ಅಂಗಡಿ, ಟೆಲರಿಂಗ್, ಹೈನುಗಾರಿಕೆ ಇತ್ಯಾದಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ ಎಂದರು. ಪಂಚ ಗ್ಯಾರಂಟಿ ಯೋಜನೆಗಳ ಮೂಲ ಉದ್ದೇಶ ಗ್ರಾಮಿಣ ಹಾಗು ನಗರ ಪ್ರದೇಶದಲ್ಲಿನ ಎಲ್ಲಾ ವರ್ಗದ ಜನರಿಗೆ ಯೋಜನೆಗಳ ಲಾಭ ತಲುಪಿಸುವದಾಗಿದೆ ಎಂದರು. ಪ್ರಾಸ್ತಾವಿಕವಾಗಿ ತಾಲೂಕ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗು ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರದ ನಿರ್ಧಾರ ಶ್ಲಾಘನೀಯವಾಗಿದೆ ಎಂದರು. ಬಡವರ, ಮಧ್ಯಮವರ್ಗದವರ, ದೀನ ದುರ್ಬಲರಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು. ಪ್ರತಿಯೊಂದು ಕುಟುಂಬವು ಈ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನೆ ತಲುಪಲು ಅನುಷ್ಠಾನ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು. ಮಹಿಳಾ ದಿನಾಚರಣೆಯ ಕುರಿತು ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ ಹಾಗೂ ಪಂಚಾಯತ ಅಭಿವೃದ್ದಿ ಅಧಿಕಾರಿ ಗೀತಾ ಕುಮಾರಿ, ಗ್ರಾಮ ಕಾಯಕ ಮಿತ್ರ ಯಮನಮ್ಮ ಪೂಜಾರ ಅನಿಸಿಕೆ ವ್ಯಕ್ತಪಡಿಸಿದರು. ಕೇಕ್ ಕತ್ತರಿಸಿ ಖುಷಿ ಪಟ್ಟ ಮಹಿಳೆಯರು: ಕಾರ್ಯಕ್ರಮದಲ್ಲಿ 05 ಕೆಜಿ ಕೆಕ್ ಕತ್ತರಿಸುವ ಮೂಲಕ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲಾ ಮಹಿಳೆಯರು ಖುಷಿ ಪಟ್ಟರು. ಮಹಿಳಾ ದಿನಾಚರಣೆ ಮೂಲಕ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಎಲ್ಲರ ಮನದಲ್ಲಿ ಖುಷಿ ಮನೆ ಮಾಡಿತು. ಗೃಹಲಕ್ಷ್ಮೀ ಹಣದಿಂದ ಆರ್ಥಿಕ ಚಟುವಟಿಕೆಯಾದ ಬ್ಯಾಗ್ ತಯಾರಿಕೆ ಮೂಲಕ ಆರ್ಥಿಕ ಸಬಲರಾದ ಕೊಪ್ಪಳ ನಗರದ ಜರಿನಾ ಬೇಗಂ ಹಾಗು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಯಿಸಿ ಆ ಮೂಲಕ ನೀರಾವರಿ ಮೂಲಕ ವ್ಯವಸ್ಯಾಯ ಮಾಡುತ್ತಿರುವ ಹಟ್ಟಿ ಗ್ರಾಮದ ನಿಂಗಮ್ಮ ತಳವಾರ ಇವರಿಗೆ ಆತ್ಮೀಯವಾಗಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅನುಷ್ಠಾನ ಅಧಿಕಾರಿಗಳು ತಮ್ಮ ಇಲಾಖೆಯಿಂದ ದೊರೆಯುವ ಪಂಚ ಗ್ಯಾರಂಟಿ ಯೋಜನೆಗಳ ವಿವರವಾದ ಮಾಹಿತಿಯನ್ನು ಕಾರ್ಯಕ್ರಮದಲ್ಲಿ ನೀಡಿದರು. ಕಾರ್ಯಕ್ರಮದಲ್ಲಿ ಅನುಷ್ಠಾನ ಸಮಿತಿ ಸದಸ್ಯರಾದ ದೇವರಾಜ ನಡುವಿನಮನಿ, ಮಾನ್ವಿ ಪಾಶಾ, ಅನ್ನದಾನಯ್ಯಸ್ವಾಮಿ, ಸವಿತಾ ಅಶೋಕ ಗೊರಂಟ್ಲಿ, ಪರಶುರಾಮ ಕೊರವರ, ಲಕ್ಷ್ಮಣ ಡೊಳ್ಳಿನ, ಜ್ಯೋತಿ ಗೊಂಡಬಾಳ, ರಾಮಣ್ಣ ಚೌಡ್ಕಿ, ಪಂಚ ಗ್ಯಾರಂಟಿ ಯೋಜನೆಗಳ ಇಲಾಖಾಧಿಕಾರಿಗಳು, ತಾಲೂಕ ಪಂಚಾಯತಿ ಹಾಗು ಗ್ರಾಮ ಪಂಚಾಯತಿಗಳ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳು, ಸಂಜಿವಿನಿ ಯೋಜನೆಯ ತಾ.ಪಂ ಸಿಬ್ಬಂದಿ ಹಾಗು ಗ್ರಾ.ಪಂ ಮಟ್ಟದ ಹಾಗು ವಾರ್ಡ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್