
ವಿಜಯಪುರ, 12 ಮಾರ್ಚ್ (ಹಿ.ಸ.)
ಆ್ಯಂಕರ್ : ಜ್ಞಾನ, ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಸಂದೇಶವನ್ನು ಜನರಲ್ಲಿ ಹರಡುವ ಉದ್ದೇಶದಿಂದ ವಿಜಯಪುರದಲ್ಲಿ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ತನು ಫೌಂಡೇಶನ್ ತಿಳಿಸಿದೆ.
ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಈ ಸಾಹಿತ್ಯ ಮೇಳ ನಡೆಯಲಿದ್ದು, ಪುಸ್ತಕಗಳ ಮೂಲಕ ಜ್ಞಾನ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮನು ಪೌಂಡೇಷನ್ ಅಧ್ಯಕ್ಷ ವಿಜುಗೌಡ ತಿಳಿಸಿದರು.
ಸಾಹಿತ್ಯ ಮೇಳದಲ್ಲಿ ವಿವಿಧ ಪುಸ್ತಕಗಳ ಪ್ರದರ್ಶನ ಹಾಗೂ ಓದುಗರಿಗೆ ಹೊಸ ಚಿಂತನೆಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ನಡೆಯಲಿವೆ. “ಪುಸ್ತಕಗಳು ಮಾತಾಡುತ್ತವೆ… ಜ್ಞಾನಕ್ಕಾಗಿ, ಸ್ವಾತಂತ್ರ್ಯಕ್ಕಾಗಿ, ಸಮಾನತೆ ಮತ್ತು ಸಾಮಾಜಿಕ ಬದಲಾವಣೆಗಾಗಿ ಮತ್ತೆ ಮತ್ತೆ ಮಾತಾಡುತ್ತಲೇ ಇರುತ್ತವೆ” ಎಂಬ ಸಂದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸ್ನೇಹಿತರನ್ನೂ ಕರೆತಂದು ಒಂದು ಪುಸ್ತಕ ಹಿಡಿದು ಹೊಸ ಚಿಂತನೆ ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ. ಸಮಾಜದಲ್ಲಿ ಸಮಸಮಾಜದ ಕನಸನ್ನು ಸಾಕಾರಗೊಳಿಸುವ ದಿಕ್ಕಿನಲ್ಲಿ ಇದು ಅರ್ಥಪೂರ್ಣ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande