
ವಿಜಯಪುರ, 12 ಮಾರ್ಚ್ (ಹಿ.ಸ.)
ಆ್ಯಂಕರ್ : ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಮಹಾಯೋಜನೆ–2041 ಕುರಿತು ನಗರಕ್ಕೆ ಹೊಂದಿಕೊಂಡಿರುವ 9 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.
ಗುರುವಾರ ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ಅಮೃತ ಯೋಜನೆಯಡಿ ಜಿ.ಐ.ಎಸ್ ಆಧಾರಿತ ಮಹಾಯೋಜನೆ–2041 (ಪ–3) ಅನುಷ್ಠಾನ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯ ಯೋಜನಾ ಪ್ರದೇಶಕ್ಕೆ ಸಂಬಂಧಿಸಿದ ಮಹಾಯೋಜನೆಗೆ ಸರ್ಕಾರದಿಂದ ತಾತ್ಕಾಲಿಕ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಯೋಜನಾ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಲಹೆ ಹಾಗೂ ಆಕ್ಷೇಪಣೆಗಳ ಕುರಿತು ಚರ್ಚೆ ನಡೆಸಲಾಯಿತು. ಕೇವಲ ದಶಕದ ಹಿಂದೆ ಹೋಲಿಸಿದರೆ ವಿಜಯಪುರ ನಗರವು ಈಗ ಬಹುಮಟ್ಟಿಗೆ ಅಭಿವೃದ್ಧಿ ಹೊಂದಿದೆ. ಇದೇ ರೀತಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯತಿಗಳೂ ಸಹ ಅಭಿವೃದ್ಧಿ ಹೊಂದಬೇಕು ಎಂಬುದು ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶವಾಗಿದೆ. ನೀರು, ರಸ್ತೆ, ವಿದ್ಯುತ್, ಒಳಚರಂಡಿ, ಸಾರಿಗೆ ವ್ಯವಸ್ಥೆ ಹಾಗೂ ಮಾರುಕಟ್ಟೆ ಅಭಿವೃದ್ಧಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಈ ಯೋಜನೆ ಸಹಾಯಕವಾಗಲಿದೆ. ವಿಶೇಷವಾಗಿ ಹಿಂದುಳಿದ ವರ್ಗಗಳ ಜನತೆಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.
ವಿಜಯಪುರ ನಗರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಒಟ್ಟು 17 ಗ್ರಾಮಗಳು ಸೇರಿದ್ದು, 05–04–2016ರ ಸರ್ಕಾರದ ಅಧಿಸೂಚನೆಯ ಪ್ರಕಾರ ಈ ಪ್ರದೇಶವು ಸುಮಾರು 525 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಒಳಗೊಂಡಿದೆ. ಭಾರತ ಸರ್ಕಾರದ ಅಮೃತ ಯೋಜನೆಯಡಿ ಮೂಲಭೂತ ನಾಗರಿಕ ಸೌಕರ್ಯಗಳ ಅಭಿವೃದ್ಧಿಗೆ ದೇಶದ 500 ನಗರಗಳನ್ನು ಗುರುತಿಸಲಾಗಿದ್ದು, ಕರ್ನಾಟಕದ 26 ನಗರಗಳಲ್ಲಿ ವಿಜಯಪುರವೂ ಆಯ್ಕೆಯಾಗಿದೆ ಎಂದು ತಿಳಿಸಿದರು.
ನಗರದ ಇತ್ತೀಚಿನ ಬೆಳವಣಿಗೆ ಹಾಗೂ ನಿರ್ಮಿತಿಗಳನ್ನು ಆಧರಿಸಿ ಜಿ.ಐ.ಎಸ್ ಆಧಾರಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ. ಕೆಎಸ್ಆರ್ಎಸ್ಎಸಿ ಸಂಸ್ಥೆಯಿಂದ ಉಪಗ್ರಹ ಚಿತ್ರಗಳನ್ನು ಪಡೆದು ಕಂದಾಯ ಇಲಾಖೆಯ ನಕ್ಷೆಗಳನ್ನು ಆಧಾರವಾಗಿ ಬಳಸಿಕೊಂಡು ಮೂಲ ನಕ್ಷೆ (ಬೇಸ್ ಮ್ಯಾಪ್) ತಯಾರಿಸಲಾಗಿದೆ ಎಂದು ವಿವರಿಸಿದರು.
ಪ್ರಸ್ತುತ ಮಹಾನಗರ ಪಾಲಿಕೆಯ 35 ವಾರ್ಡ್ ಗಳಲ್ಲಿ 3,27,427 ಜನರು ವಾಸಿಸುತ್ತಿದ್ದು, 9 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 15 ಗ್ರಾಮಗಳಲ್ಲಿ 60,508 ಜನಸಂಖ್ಯೆ ಇದೆ. 2011ರ ಜನಗಣತಿ ಆಧರಿಸಿ 2041ರ ವೇಳೆಗೆ ಈ ಪ್ರದೇಶದ ಜನಸಂಖ್ಯೆ ಸುಮಾರು 8.75 ಲಕ್ಷಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ನಗರ ಬೆಳವಣಿಗೆ ಹಾಗೂ ಜನಸಂಖ್ಯೆ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ–1961ರ ಕಲಂ 12 ಮತ್ತು 13ರ ಅನ್ವಯ ಜಿ.ಐ.ಎಸ್ ಆಧಾರಿತ ಮಹಾಯೋಜನೆ ನಕ್ಷೆ ಸಿದ್ಧಪಡಿಸಲಾಗಿದೆ. ಸುಮಾರು 15,591.30 ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ರೂಪಿಸಿದ ಯೋಜನೆಗೆ ಸರ್ಕಾರವು 02–01–2026ರಂದು ತಾತ್ಕಾಲಿಕ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಈ ಮಹಾಯೋಜನೆಯಡಿ ವಸತಿ, ವಾಣಿಜ್ಯ, ಕೈಗಾರಿಕೆ ಸೇರಿದಂತೆ ವಿವಿಧ ಭೂ ಉಪಯೋಗಗಳಿಗೆ ಸಂಬಂಧಿಸಿದ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಕಟ್ಟಡಗಳ ಮಧ್ಯದ ಅಂತರ, ಗಾಳಿ–ಬೆಳಕು ವ್ಯವಸ್ಥೆ, ಅಗ್ನಿ ಸುರಕ್ಷತೆ, ರಸ್ತೆ ಅಗಲ, ಕಟ್ಟಡ ಎತ್ತರ ಹಾಗೂ ವಾಹನ ನಿಲುಗಡೆ ಸೌಲಭ್ಯಗಳಂತಹ ಅಂಶಗಳನ್ನು ನಿಯಂತ್ರಿಸುವ ನಿಯಮಗಳನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.
ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಯೋಜಿತ ಬೆಳವಣಿಗೆಗಳು, ಕೈಗಾರಿಕಾ ವಲಯಗಳು, ನೀರಾವರಿ ನಾಲೆಗಳು, ಜಲ ಮೂಲಗಳು ಹಾಗೂ ಇತರೆ ಮೂಲಸೌಕರ್ಯಗಳ ಕುರಿತು ಅಗತ್ಯ ದಾಖಲೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ವಿವಿಧ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande