ಐಐಐಟಿ-ಧಾರವಾಡದಲ್ಲಿ ಕ್ವಾಂಟಮ್ ಕಂಪ್ಯೂಟರ್ ಅಳವಡಿಕೆ ರಾಜ್ಯದ ಅನ್ವಯಿಕ ವಿಜ್ಞಾನದ ಪ್ರಮಖ ಮೈಲುಗಲ್ಲು: ಸಚಿವ ಭೋಸರಾಜು
ಬೆಂಗಳೂರು, 11 ಮಾರ್ಚ್ (ಹಿ.ಸ.): ಆ್ಯಂಕರ್: ಐಐಐಟಿ-ಧಾರವಾಡದಲ್ಲಿ ಕ್ವಾಂಟಮ್ ಕಂಪ್ಯೂಟರ್ ಅಳವಡಿಕೆ ರಾಜ್ಯದ ಅನ್ವಯಿಕ ವಿಜ್ಞಾನದ ಕ್ಷೇತ್ರದ ಪ್ರಮಖ ಮೈಲುಗಲ್ಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಹೇಳಿದ್ದಾರೆ. ಇಂದು ವಿಧಾನಸೌಧದ ಸಮಿತಿ ಕೊಠಡಿ
Mou


ಬೆಂಗಳೂರು, 11 ಮಾರ್ಚ್ (ಹಿ.ಸ.):

ಆ್ಯಂಕರ್:

ಐಐಐಟಿ-ಧಾರವಾಡದಲ್ಲಿ ಕ್ವಾಂಟಮ್ ಕಂಪ್ಯೂಟರ್ ಅಳವಡಿಕೆ ರಾಜ್ಯದ ಅನ್ವಯಿಕ ವಿಜ್ಞಾನದ ಕ್ಷೇತ್ರದ ಪ್ರಮಖ ಮೈಲುಗಲ್ಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಹೇಳಿದ್ದಾರೆ.

ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಐಐಐಟಿ-ಧಾರವಾಡದ 'ಕ್ವಾಂಟಮ್ ಕಂಪ್ಯೂಟಿಂಗ್ ಸೆಂಟರ್ ಆಫ್ ಎಕ್ಸಲೆನ್ಸ್'ನಲ್ಲಿ ತನ್ನ 'ಕ್ಯುಪಿಎಐ ಇಂಡಸ್' ಕ್ವಾಂಟಮ್‌ ಕಂಪ್ಯೂಟರ್‌ ವ್ಯವಸ್ಥೆಯನ್ನು ಅಳವಡಿಸುವ ಒಪ್ಪಂದದ ಪತ್ರವನ್ನು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಜ್ಞಾನ ಮತ್ತು ತಂತ್ರಜ್ಞಾನವು ಯಾವಾಗಲೂ ಕರ್ನಾಟಕದ ಪ್ರಗತಿಯ ಪ್ರಬಲ ಸಾಧನಗಳಾಗಿವೆ. ಐಐಐಟಿ-ಧಾರವಾಡದಲ್ಲಿ 25-ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟರ್ ಅಳವಡಿಕೆಯು ನಮ್ಮ ರಾಜ್ಯದ ಅನ್ವಯಿಕ ವಿಜ್ಞಾನದ ಪಾಲಿಗೆ ಒಂದು ನಿರ್ಣಾಯಕ ಘಟ್ಟವಾಗಿದೆ. ಉನ್ನತ ಮಟ್ಟದ ಶೈಕ್ಷಣಿಕ ಸಂಸ್ಥೆಯೊಳಗೆ ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ಅಳವಡಿಸುವ ಮೂಲಕ, ಕರ್ನಾಟಕದ ತರಗತಿಗಳು ಮತ್ತು ಪ್ರಯೋಗಾಲಯಗಳಲ್ಲೇ ಭವಿಷ್ಯದ ಸಂಶೋಧನೆ, ಪ್ರಯೋಗ ಮತ್ತು ಆವಿಷ್ಕಾರಗಳನ್ನು ಮಾಡುವುದಕ್ಕೆ ಇದು ಅನುವು ಮಾಡಿಕೊಡಲಿದೆ ಎಂದರು.

2025 ಆಗಸ್ಟ್‌ ತಿಂಗಳಲ್ಲಿ ಬೆಂಗಳೂರು ಇಂಡಿಯಾ ಕ್ವಾಂಟಮ್‌ ಸಮಾವೇಶದಲ್ಲಿ ಈ ಎರಡೂ ಸಂಸ್ಥೆಗಳು ಮಾಡಿಕೊಂಡಿದ್ದ ಒಪ್ಪಂದದ ಹಿನ್ನಲೆಯಲ್ಲಿ ಇಂದು ಕ್ವಾಂಟಮ್‌ ಕಂಪ್ಯೂಟರ್‌ ಅಳವಡಿಸುವ ಅಧಿಕೃತ ಪತ್ರಕ್ಕೆ ಸಹಿ ಹಾಕಿವೆ. ಈ ಕ್ಯುಪಿಎಐ ಇಂಡಸ್ ಕ್ವಾಂಟಮ್‌ ಕಂಪ್ಯೂಟರ್‌ ಅನ್ನು ಶೈಕ್ಷಣಿಕ ಬಳಕೆಗಾಗಿ—ಅಂದರೆ ಪಠ್ಯಕ್ರಮ ಅಭಿವೃದ್ಧಿ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಮತ್ತು ಬೋಧಕರ ನೇತೃತ್ವದ ಸಂಶೋಧನೆಗಳಿಗೆ ಬಳಸಿಕೊಳ್ಳಲಾಗುತ್ತದೆ. ಇದಲ್ಲದೆ, ತಂತ್ರಜ್ಞಾನದ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಕ್ವಾಂಟಮ್ ಕಂಪ್ಯೂಟಿಂಗ್ ಅನ್ನು ವಾಣಿಜ್ಯ ಉದ್ದೇಶಗಳಿಗೂ ಇದು ಅನುವು ಮಾಡಿಕೊಡಲಿದೆ. ಐಐಐಟಿ-ಧಾರವಾಡದ ಬಳಕೆದಾರರಿಗೆ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿವಿಧ ಸಂಶೋಧನೆ ಹಾಗೂ ಉದ್ಯಮದ ಕಾರ್ಯಗಳಲ್ಲಿ ಇದನ್ನು ಬಳಸಿಕೊಳ್ಳಲು ಕ್ಯುಪಿಎಐ ಸಂಸ್ಥೆಯು ನಿರಂತರ ಬೆಂಬಲವನ್ನು ಒದಗಿಸಲಿದೆ. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಂತ್ರಜ್ಞಾನದ ಬಳಕೆಗೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಹಾಗೆಯೇ, ಐಐಐಟಿ ರಾಯಚೂರಿನಲ್ಲಿಯೂ ಇದರ ಬಳಕೆಗೆ ಅನುವು ಮಾಡಿಕೊಡುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ಕ್ಯೂಪೈಎಐ ನ ಸಿಇಓ ನಾಗೇಂದ್ರ ನಾಗರಾಜ ಅವರು ಮಾತನಾಡಿ ಕೆಐಎಡಿಬಿ ವತಿಯಿಂದ 10 ಏಕರೆ ಜಾಗವನ್ನು ಮಂಜೂರು ಮಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಸಚಿವರಾದ ಎನ್‌ ಎಸ್‌ ಭೋಸರಾಜು ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಧನ್ಯವಾದ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಐಟಿ/ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎನ್‌ ಮಂಜುಳಾ ಕ್ಯುಪಿಎಐ ಐಐಐಟಿ ಧಾರವಾಡದ ನಿರ್ದೇಶಕರಾದ ಡಾ ಮಹದೇವ ಪ್ರಸನ್ನ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande