
ಧಾರವಾಡ, 11 ಮಾರ್ಚ್ (ಹಿ.ಸ.):
ಆ್ಯಂಕರ್:
ಜನಗಣತಿ–2027 ಕಾರ್ಯದ ಭಾಗವಾಗಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕಚೇರಿಯಲ್ಲಿ ಕ್ಷೇತ್ರ ತರಬೇತುದಾರರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರ ಆರಂಭವಾಗಿದೆ.
ನಗರ ಜನಗಣತಿ ಅಧಿಕಾರಿ ಅನುರಾಧಾ ವಸ್ತ್ರದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜನಗಣತಿ ಕಾರ್ಯವು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು. ಮೊದಲ ಹಂತದಲ್ಲಿ 2026ರ ಏಪ್ರಿಲ್ 1ರಿಂದ 15ರವರೆಗೆ ಸ್ವಯಂ ಗಣತಿ, ನಂತರ ಏಪ್ರಿಲ್ 16ರಿಂದ ಮೇ 15ರವರೆಗೆ ಮನೆ ಪಟ್ಟಿ ಹಾಗೂ ಮನೆ ಗಣತಿ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಜನಗಣತಿ ಪ್ರಕ್ರಿಯೆ ಈ ಬಾರಿ ಸಂಪೂರ್ಣ ಡಿಜಿಟಲ್ ವಿಧಾನದಲ್ಲಿ ನಡೆಯಲಿದ್ದು, ಮಾಹಿತಿಯ ಸಂಗ್ರಹಣೆ ಹಾಗೂ ಕಾರ್ಯಪದ್ಧತಿಗಳ ಕುರಿತು ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇಂದಿನಿಂದ ಮಾರ್ಚ್ 13ರವರೆಗೆ ನಡೆಯುವ ಈ ತರಬೇತಿಯಲ್ಲಿ ಧಾರವಾಡ ಜಿಲ್ಲೆಯ 62 ಕ್ಷೇತ್ರ ತರಬೇತುದಾರರು ಭಾಗವಹಿಸಿದ್ದಾರೆ. ಬೆಂಗಳೂರು ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಮಂಜುನಾಥ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಯುತ್ತಿದೆ.
ಕಾರ್ಯಕ್ರಮದಲ್ಲಿ ಆರ್.ಎಂ. ಕಂಟೆಪ್ಪಗೌಡರ ಹಾಗೂ ರಶ್ಮಿ ಕೌಶಿಕ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa