ಬುದ್ಧಿವಾದ ; ವಿದ್ಯಾರ್ಥಿ ನೇಣಿಗೆ
ಬಳ್ಳಾರಿ, 11 ಮಾರ್ಚ್ (ಹಿ.ಸ.) ಆ್ಯಂಕರ್: ಬಳ್ಳಾರಿಯ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಯ ಕೊಲೆಯನ್ನು ಮರೆಯುವ ಮೊದಲೇ ಸಂಜಯಗಾಂಧಿ ಪಾಲಿಟೆಕ್ನಿಕ್ನ ವಿದ್ಯಾರ್ಥಿಯನ್ನು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಪೋಷಕರ ಸಮ್ಮುಖದಲ್ಲಿ ಮಂಗಳವಾರ ಬುದ್ಧಿವಾದ ಹೇಳಿದ್ದಕ್ಕಾಗಿ ಮನೆಯಲ್
ಬುದ್ಧಿವಾದ ; ವಿದ್ಯಾರ್ಥಿ ನೇಣಿಗೆ


ಬಳ್ಳಾರಿ, 11 ಮಾರ್ಚ್ (ಹಿ.ಸ.)

ಆ್ಯಂಕರ್: ಬಳ್ಳಾರಿಯ ಗುರುಕುಲ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಯ ಕೊಲೆಯನ್ನು ಮರೆಯುವ ಮೊದಲೇ ಸಂಜಯಗಾಂಧಿ ಪಾಲಿಟೆಕ್ನಿಕ್ನ

ವಿದ್ಯಾರ್ಥಿಯನ್ನು ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರು ಪೋಷಕರ ಸಮ್ಮುಖದಲ್ಲಿ ಮಂಗಳವಾರ ಬುದ್ಧಿವಾದ ಹೇಳಿದ್ದಕ್ಕಾಗಿ ಮನೆಯಲ್ಲಿ ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡಿಪ್ಲೋಮಾದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಅರವಿಂದ್ (19) ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿ ಅರವಿಂದ ಸಹಪಾಠಿಗಳ ಜೊತೆಯಲ್ಲಿ ಗಲಾಟೆ ಮಾಡಿಕೊಂಡಿದ್ದ. ಈ ಕುರಿತು ವಿಭಾಗದ ಮುಖ್ಯಸ್ಥರು ಮತ್ತು ಬೋಧಕರು ವಿದ್ಯಾರ್ಥಿಯ ಪೋಷಕರನ್ನು ಕಾಲೇಜಿಗೆ ಕರೆಯಿಸಿ, ಪೋಷಕರ ಸಮ್ಮುಖದಲ್ಲಿಯೇ ಬುದ್ಧಿವಾದ ಹೇಳಿದ್ದರು. ಇದರಿಂದ ಜಿಗುಪ್ಸೆಗೊಂಡಿದ್ದ ಅರವಿಂದ್ ಮಂಗಳವಾರ ರಾತ್ರಿ ಅಥವಾ ಬುಧವಾರ ನಸುಕಿನಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ ಅರವಿಂದನ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ನಡೆಯುತ್ತಿದ್ದಾಗ ಕೆಲ ವಿದ್ಯಾರ್ಥಿಗಳು ಆಕ್ರೋಶದಿಂದ ದ್ವಿಚಕ್ರ ವಾಹನದಲ್ಲಿ ಆವೇಶದಿಂದ ಬಂದು, ಬುದ್ಧಿವಾದ ಹೇಳಿರುವ ವಿಭಾಗದ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿ, ಕೈಗೆ ಸಿಕ್ಕ ವಸ್ತುಗಳನ್ನು ಕಾಲೇಜಿನ ಕೋಣೆಗಳಲ್ಲಿ ಎಸೆದು, ದಾಂಧಲೆ ನಡೆಸಿದ್ದಾರೆ. ಅಲ್ಲದೇ, ವಿದ್ಯಾರ್ಥಿಗಳಲ್ಲಿ ಆತಂಕದ ವಾತಾವರಣವನ್ನು ಸೃಷ್ಠಿಸಿದ್ದಾರೆ.

ಬ್ರೂಸ್ಪೇಟೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಘಟನೆಯು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸುತ್ತಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande