ಮಾ.18 ರಿಂದ ಏ.2ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ–ಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ
ವಿಜಯಪುರ, 11 ಮಾರ್ಚ್ (ಹಿ.ಸ.) ಆ್ಯಂಕರ್ : ಇದೇ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಾವುದೇ ಲೋಪವಾಗದಂತೆ ಪಾರದರ್ಶಕ, ವ್ಯವಸ್ಥಿತ ಹಾಗೂ ಸುಸೂತ್ರವಾಗಿ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ
Sslc exam


ವಿಜಯಪುರ, 11 ಮಾರ್ಚ್ (ಹಿ.ಸ.)

ಆ್ಯಂಕರ್ :

ಇದೇ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಾವುದೇ ಲೋಪವಾಗದಂತೆ ಪಾರದರ್ಶಕ, ವ್ಯವಸ್ಥಿತ ಹಾಗೂ ಸುಸೂತ್ರವಾಗಿ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ ನೀಡಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ 2025–26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು.

ಪರೀಕ್ಷೆಯ ಪಾವಿತ್ರ್ಯತೆ ಕಾಪಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ಬಿಇಒ ಹಾಗೂ ತಹಶೀಲ್ದಾರ್ಗಳು ತಮ್ಮ ತಮ್ಮ ತಾಲೂಕುಗಳಲ್ಲಿ ಸಭೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಬೇಕು. ಮೈಕ್ರೊ ಪ್ಲ್ಯಾನಿಂಗ್ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪ-ದೋಷಗಳು ಉಂಟಾಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವಂತೆ ಸೂಚಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಪೂರೈಕೆ ಇರಲು ಕ್ರಮ ಕೈಗೊಳ್ಳಬೇಕು ಎಂದರು.

ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಜವಾಬ್ದಾರಿ ಅತ್ಯಂತ ಮಹತ್ತರವಾಗಿದ್ದು, ಯಾವುದೇ ಲೋಪವಾಗದಂತೆ ಪರೀಕ್ಷೆ ನಡೆಸಲು ಅಧಿಕಾರಿಗಳು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ, ಜಿಲ್ಲೆಯ ಎಲ್ಲಾ 137 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಪಾರದರ್ಶಕವಾಗಿ ನಡೆಯುವಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಹೇಳಿದರು.

ಜಮಖಂಡಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳಾದ ಮಂಗಳಾ ನಾಯಕ ಮಾತನಾಡಿ, ಪರೀಕ್ಷೆಯ ಸಿದ್ಧತೆ ಜೂನ್ ತಿಂಗಳಿಂದಲೇ ಆರಂಭವಾಗಿದ್ದು, ಎಲ್ಲರೂ ಪಾರದರ್ಶಕ ಪರೀಕ್ಷೆಗೆ ಸಹಕರಿಸಬೇಕು ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಮಾಹಿತಿ ನೀಡಿ, ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 42,450 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 137 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಡೈಟ್ ಪ್ರಾಚಾರ್ಯ ಉಮಾದೇವಿ ಸೊನ್ನದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆಯ ಅಧಿಕಾರಿ ರಾಹುಲ್ ಭಾವಿದೊಡ್ಡಿ, ವಿಷಯ ಪರಿವೀಕ್ಷಕ ಶಿವಾನಂದ ಬ್ಯಾಹಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು ಹಾಗೂ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande