ವಿಜಯಪುರದಲ್ಲಿ ಅನಿಲ ಕೊರತೆ :ಆಟೋ, ಹೋಟೆಲ್ ಬಂದ್ ಆತಂಕ
ವಿಜಯಪುರ, 11 ಮಾರ್ಚ್ (ಹಿ.ಸ.) ಆ್ಯಂಕರ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದ ಹಲವು ಭಾಗಗಳಂತೆ ವಿಜಯಪುರ ಜಿಲ್ಲೆಗೂ ಅನಿಲ ಕೊರತೆಯ ಸಮಸ್ಯೆ ಎದುರಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇದರಿಂದ ಹೋಟೆಲ್ ಉದ್ಯಮ ಹಾಗೂ ಎಲ್ಪಿಜಿ ಬಳಸಿ ಓಡುವ ಆಟೋ ರಿಕ್ಷಾ ಚಾಲಕರು ತೀವ್ರ ಸಂಕಷ್
Auto protest


ವಿಜಯಪುರ, 11 ಮಾರ್ಚ್ (ಹಿ.ಸ.)

ಆ್ಯಂಕರ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ದೇಶದ ಹಲವು ಭಾಗಗಳಂತೆ ವಿಜಯಪುರ ಜಿಲ್ಲೆಗೂ ಅನಿಲ ಕೊರತೆಯ ಸಮಸ್ಯೆ ಎದುರಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಇದರಿಂದ ಹೋಟೆಲ್ ಉದ್ಯಮ ಹಾಗೂ ಎಲ್ಪಿಜಿ ಬಳಸಿ ಓಡುವ ಆಟೋ ರಿಕ್ಷಾ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಗರದಲ್ಲಿನ ಅನೇಕ ಹೋಟೆಲ್ ಗಳಿಗೆ ದಿನಕ್ಕೆ ಮೂರ ರಿಂದ ನಾಲ್ಕು ಗ್ಯಾಸ್ ಸಿಲಿಂಡರ್ ಅಗತ್ಯವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಎದುರಾಗಿರುವುದರಿಂದ ಹೋಟೆಲ್ ಮಾಲೀಕರು ಆತಂಕದಲ್ಲಿದ್ದಾರೆ. ಕೆಲ ಹೋಟೆಲ್ಗಳು ಆಹಾರ ಇಲಾಖೆ ಕಣ್ಣು ತಪ್ಪಿಸಿ ಮನೆ ಬಳಕೆಯ ಸಿಲಿಂಡರ್ ಬಳಸುತ್ತಿರುವುದರಿಂದ ಪೂರೈಕೆ ವ್ಯವಸ್ಥೆಯಲ್ಲೂ ಗೊಂದಲ ಉಂಟಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಎಲ್ಪಿಜಿ ಗ್ಯಾಸ್ ಬಳಸಿ ಓಡುವ ಆಟೋ ರಿಕ್ಷಾ ಚಾಲಕರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿನ ಹಲವಾರು ಗ್ಯಾಸ್ ಪಂಪ್ಗಳಲ್ಲಿ ಅನಿಲ ಕೊರತೆಯಿಂದ ಪೂರೈಕೆ ಸ್ಥಗಿತಗೊಂಡಿದ್ದು, ಅನಿಲ ದೊರೆಯುವ ಪಂಪ್‌ಗಳ ಮುಂದೆ ಆಟೋ ಮತ್ತು ಕಾರುಗಳ ಉದ್ದ ಸಾಲುಗಳು ಕಂಡುಬರುತ್ತಿವೆ.

ಈ ಮಧ್ಯೆ ಕೆಲವೆಡೆ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುವ ಅಡ್ಡಾಗಳಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿರುವುದು ಕಂಡುಬಂದಿದೆ. ರಿಫಿಲ್ಲಿಂಗ್ ಮಾಡಿಸಿಕೊಳ್ಳಲು ಆಟೋಗಳು ಸಾಲಾಗಿ ನಿಂತಿರುವ ದೃಶ್ಯಗಳು ಸಹ ಸಾಮಾನ್ಯವಾಗಿವೆ.

ವಿಜಯಪುರ ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳು ಎಲ್ಪಿಜಿ ಗ್ಯಾಸ್ ಬಳಸಿ ಸಂಚರಿಸುತ್ತಿವೆ. ಆದರೆ ಅನಿಲ ಕೊರತೆ ಮುಂದುವರಿದರೆ ಇನ್ನೂ ಎರಡು ದಿನಗಳಲ್ಲಿ ಆಟೋಗಳ ಓಡಾಟವೇ ನಿಲ್ಲುವ ಪರಿಸ್ಥಿತಿ ಉಂಟಾಗಬಹುದು ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಸ್ಯೆ ಗಂಭೀರವಾಗುವ ಮೊದಲು ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ತಕ್ಷಣ ಕ್ರಮ ಕೈಗೊಂಡು ಅನಿಲ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೋಟೆಲ್ ಮಾಲೀಕರು ಮತ್ತು ಆಟೋ ಚಾಲಕರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande