









ಬಳ್ಳಾರಿ, 11 ಮಾರ್ಚ್ (ಹಿ.ಸ.)
ಆ್ಯಂಕರ್: ಜೆಎಸ್ಡಬ್ಲ್ಯೂ ಮತ್ತು ಜಪಾನ್ನ್‌್ ಜೆಎಫ್ಇ ಎಲೆಕ್ಟ್ರಿಕಲ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ 11,890 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿರುವ ಕರ್ನಾಟಕದ ಮೊಟ್ಟಮೊದಲ `ಕೋಲ್ಡ್ ರೋಲ್ಡ್ ಗ್ರೆನ್ ಓರಿಯೆಂಟೆಡ್ (ಸಿಆರ್ಜಿಓ) ಎಲೆಕ್ಟ್ರಿಕಲ್ ಸ್ಟೀಲ್' ಘಟಕಕ್ಕೆ
ಮಣ್ಣು ಪರೀಕ್ಷೆ ನಡೆಸಲು ಸ್ಥಳಕ್ಕೆ ಬಂದಿದ್ದವರನ್ನು ಪ್ರತಿಭಟನಾಕಾರರು ತಡೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ನ ಆದೇಶದ ಪ್ರಕಾರ ಹೆಚ್ಚಿನ ಭೂ ಪರಿಹಾರ ಪಾವತಿಗಾಗಿ ಆಗ್ರಹಿಸಿ ಕುಡತಿನಿ, ವೇಣಿವೀರಾಪುರ, ಸಿದ್ದಮ್ಮನಹಳ್ಳಿ, ಹರಗಿನಡೋಣಿ ಸೇರಿ ವಿವಿಧ ಗ್ರಾಮಗಳ 1200 ಎಕರೆ ಭೂಮಿಯ ಭೂ ಸಂತ್ರಸ್ತ ರೈತರು ಕುಡತಿನಿಯಲ್ಲಿ 1181 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯು ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿದೆ. ಈ ಮಧ್ಯೆ ಆರ್ಸಲರ್ ಮಿತ್ತಲ್ ಘಟಕಕ್ಕೆ ಸೇರಿದ್ದ 250 ಎಕರೆ ಭೂಮಿಯನ್ನು ಜಿಂದಾಲ್ ಕಂಪನಿಯು ಕೆಐಎಡಿಬಿಯಿಂದ ಪಡೆದು `ಕೋಲ್ಡ್ ರೋಲ್ಡ್ ಗ್ರೆನ್ ಓರಿಯೆಂಟೆಡ್ (ಸಿಆರ್ಜಿಒ) ಎಲೆಕ್ಟ್ರಿಕಲ್ ಸ್ಟೀಲ್' ಘಟಕ ನಿರ್ಮಾಣಕ್ಕೆ ಮಣ್ಣು ಪರೀಕ್ಷೆಗೆ ಮುಂದಾಗಿದೆ.
ಮಣ್ಣು ಪರೀಕ್ಷೆಗೆ ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ಪ್ರತಿಭಟನಾಕಾರರು ಹೆಚ್ಚುವರಿ ಭೂ ಪರಿಹಾರ, ಉದ್ಯೋಗ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಡೆದು, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬುಧವಾರ ಬೆಳಗ್ಗೆ ವಶಕ್ಕೆ ತೆಗೆದುಕೊಂಡು, 3 ರಿಂದ 4 ಡಿಎಆರ್ ವ್ಯಾನ್ಗಳಲ್ಲಿ ಡಿಎಆರ್ ಗ್ರೌಂಡ್ಗೆ ಕರೆದುಕೊಂಡು ಬಂದಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ಹಾಗೂ ಎಡ ಪಕ್ಷಗಳ ಸಂಘಟನೆಗಳು ಖಂಡಿಸಿವೆ. ಸಂಸದರಾದ ಈ. ತುಕಾರಾಂ ಅವರು ಜಿಂದಾಲ್ನ ಏಜೆಂಟರಂತೆ, ಭೂ ಸಂತ್ರಸ್ತರ ವಿರೋಧಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರೈತ ಪ್ರಾಂತ ಸಂಘದ ರಾಜ್ಯಾಧ್ಯಕ್ಷರು, ಪ್ರತಿಭಟನಾ ನಿರತರ ನೇತಾರರು ಆಗಿರುವ ಯು. ಬಸವರಾಜ್ ಅವರು, ಸಂಸದ ಈ. ತುಕಾರಾಂ ಅವರು ಜಿಂದಾಲ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 11 ರಂದು ನಡೆಯುವ ಮಣ್ಣು ಪರೀಕ್ಷೆಗೆ, ಏಪ್ರಿಲ್ 4 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಭೂ ಸಂತ್ರಸ್ತರ ಸಭೆಯನ್ನು ಏರ್ಪಡಿಸಿದ್ದಾರೆ. ಭೂ ಸಂತ್ರಸ್ತರನ್ನು ವಂಚಿಸುತ್ತಿರುವ ಸಂಸದರು ಭವಿಷ್ಯದಲ್ಲಿ ನಮ್ಮೆಲ್ಲರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಏಪ್ರಿಲ್ 4 ರಂದು ಭೂ ಸಂತ್ರಸ್ತರ ಸಭೆಯ ಫಲಿತಾಂಶವು ಆಶಾದಾಯಕವಾಗಿ, ಭೂ ಸಂತ್ರಸ್ತರ ಪರವಾಗಿ ಇದ್ದಲ್ಲಿ ಮಾತ್ರವೇ ನಾವುಗಳು ಮಣ್ಣು ಪರೀಕ್ಷೆಗೆ ಅವಕಾಶ ನೀಡುತ್ತೇವೆ. ಏಪ್ರಿಲ್ 4 ರ ಸಭೆಯವರೆಗೂ ಜಿಂದಾಲ್ ಕಂಪನಿ ಅಥವಾ ಯಾರೇ ಆಗಲಿ ಮಣ್ಣು ಪರೀಕ್ಷೆಯನ್ನು ನಡೆಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್