
ವಿಜಯಪುರ, 11 ಮಾರ್ಚ್ (ಹಿ.ಸ.):
ಆ್ಯಂಕರ್ : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿರುವುದಕ್ಕೆ ಸಂಸದ ಗೋವಿಂದ ಕಾರಜೋಳ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿದ ಅವರು ಇವಿಎಂ ಯಂತ್ರಗಳು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಪ್ರಜಾಪ್ರಭುತ್ವದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿವೆ ಎಂಬ ಕಾರಣವನ್ನು ರಾಜ್ಯ ಸರ್ಕಾರ ನೀಡಿರುವುದು ಕಾಂಗ್ರೆಸ್ ಪಕ್ಷದ ದ್ವಂದ್ವ ನಿಲುವನ್ನು ತೋರಿಸುತ್ತದೆ ಎಂದು ಕಾರಜೋಳ ಆರೋಪಿಸಿದ್ದಾರೆ.
ಇವಿಎಂ ಮೇಲೆ ನಂಬಿಕೆ ಇಲ್ಲವೆಂದು ಹೇಳುವ ಕಾಂಗ್ರೆಸ್ ಪಕ್ಷಕ್ಕೆ ದೇಶದ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳ ಮೇಲೆ ವಿಶ್ವಾಸವೇ ಇಲ್ಲ ಎಂಬುದೂ ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದರು.
ತನ್ನ ರಾಜಕೀಯ ಸೋಲನ್ನು ಇವಿಎಂ ಹಾಗೂ ಚುನಾವಣಾ ಆಯೋಗದ ಮೇಲೆ ಹೊರಿಸುವ ಮೂಲಕ ಜನರನ್ನು ತಪ್ಪುದಾರಿಗೆಳೆದುಕೊಳ್ಳುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಹೇಳಿದರು.
ಇವಿಎಂಗಳು ನಂಬಿಕೆಗೆ ಯೋಗ್ಯವಲ್ಲವೆಂದು ಕಾಂಗ್ರೆಸ್ ಆರೋಪಿಸುತ್ತಿದ್ದರೆ, ಇದೇ ಇವಿಎಂ ವ್ಯವಸ್ಥೆಯ ಮೂಲಕವೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವುದು ಹೇಗೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪ್ರಶ್ನಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ ಮೂಡಿಸುವ ಕಾಂಗ್ರೆಸ್ ಪಕ್ಷದ ನಡೆ ಖಂಡನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande