
ವಿಜಯಪುರ, 11 ಮಾರ್ಚ್ (ಹಿ.ಸ.):
ಆ್ಯಂಕರ್ : ಅಂಗಾಂಗ ದಾನದ ಕುರಿತು ಸಾರ್ವಜನಿಕರಲ್ಲಿದ್ದ ಮೂಢನಂಬಿಕೆಗಳನ್ನು ದೂರ ಮಾಡಲು ತಮ್ಮ ಬದುಕಿನುದ್ದಕ್ಕೂ ಶ್ರಮಿಸಿದ ಶತಾಯುಷಿ ಆಯುರ್ವೇದ ವೈದ್ಯೆ ಡಾ, ಸುಶೀಲಾದೇವಿ ಬಸವಣ್ಣಪ್ಪ ರಾಮಣ್ಣವರ (101) ಅವರು ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಯಿತು ಎಂದು ಬೃಹತ್ ಮತ್ತು ಸಣ್ಣ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದವರಾದ ಅವರು, ತಮ್ಮ ಪುತ್ರ ಡಾ, ಮಹಂತೇಶ್ ರಾಮಣ್ಣವರೊಂದಿಗೆ ಪತಿ ಡಾ, ರಾಮಣ್ಣವರ ಟ್ರಸ್ಟ್ ಮುಖಾಂತರ ನೇತ್ರದಾನ, ಚರ್ಮದಾನ ಹಾಗೂ ದೇಹದಾನದ ಕುರಿತು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಜಾಗೃತಿ ಮೂಡಿಸಿ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದರು.
ತಮ್ಮ ಅಂತಿಮ ಇಚ್ಛೆಯಂತೆ ದೇಹವನ್ನು ಕೆಎಲ್ಇ ಶ್ರೀ ಬಿ. ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಅವರ ನಡೆ ಸಮಾಜಕ್ಕೆ ಆದರ್ಶಪ್ರಾಯವಾಗಿದೆ.
ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸುವಲ್ಲಿ ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ. ಭಗವಂತನು ಡಾ, ಸುಶೀಲಾದೇವಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande