ಮಹಿಳೆಯ ಮೇಲೆ ದೌರ್ಜನ್ಯ ; ಕಲಾವಿದ ಮುನಿರೆಡ್ಡಿ ಕಳವಳ
ಮಹಿಳೆಯ ಮೇಲೆ ನಿರಂತರ ದೌರ್ಜನ್ಯ ; ಕಲಾವಿದ ಮುನಿರೆಡ್ಡಿ ಕಳವಳ
ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಚಿಗುರು ಸಂಸ್ಥೆಯ ಆಶ್ರಯದಲ್ಲಿ ನಡೆದ ಅಂತರಾಷ್ಟಿಯ ಮಹಿಳಾ ದಿನಾಚರಣೆಯಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.


ಕೋಲಾರ ೧೦ ಮಾರ್ಚ್ (ಹಿ.ಸ)

ಆಂಕರ್ : ಜಗತ್ತಿನಲ್ಲಿ ನಿತ್ಯ ಮಹಿಳೆಯ ಶೋಷಣೆ ನಡೆಯುತ್ತಿದೆ. ಅವರ ಭಾಷೆ, ದೇಷ, ಭಾವನೆ ಯಾವುದೇ ಆಗಿರಬಹುದು. ಪ್ರತಿ ಕ್ಷಣ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಮಾಜದಲ್ಲಿ ಶಿಕ್ಷಣದ ಪ್ರಮಾಣ ಹೆಚ್ಚುತ್ತಿದ್ದರೂ ಮಹಿಲೆಯ ಮೇಲಿನ ದೌರ್ಜನ್ಯ ಮತ್ತು ಶೋಷಣೆ ಇಂದಿಗೂ ಸಂಪೂರ್ಣವಾಗಿ ನಿಂತಿಲ್ಲ. ತಾಯಿಯಾಗಿ, ಮಡದಿಯಾಗಿ, ಅಕ್ಕ ತಂಗಿಯಾಗಿ ಮಹಿಳೆ ಕುಟುಂಬದಲ್ಲಿ ಬಹುಮುಖ ಪಾತ್ರ ವಹಿಸುತ್ತಾಳೆ. ಆದರೆ ಆಕೆಯ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಲಾವಿದ ಮುನಿರೆಡ್ಡಿ ಅಭಿಪ್ರಾಯಪಟ್ಟರು.

ಬಂಗಾರಪೇಟೆಯ ಅಕ್ಕಚ್ಚಮ್ಮ ಕಲ್ಯಾಣ ಮಂಟಪದಲ್ಲಿ ಚಿಗುರು ಟ್ರಸ್ಟ್ ಹಮ್ಮಿಕೊಂಡಿದ್ದ ೧೧೫ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಹಲವಾರು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ ಇಂದಿಗೂ ಹದಿಹರೆಯದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಕೆಲಸದ ಸ್ಥಳದಲ್ಲಿ ನಡೆಯುವ ಕಿರುಕುಳ ಮತ್ತು ದೌರ್ಜನ್ಯದಿಂದಾಗಿ ಮಹಿಳೆ ನಲುಗಿ ಹೋಗಿದ್ದಾಳೆ. ಮಹಿಳೆಯನ್ನು ನೋಡುವ ದೃಷ್ಠಿಕೋನ ಮತ್ತು ಮನಸ್ಥಿತಿ ಬದಲಾವಣೆ ಆದರೆ ಮಾತ್ರ ದೌರ್ಜನ್ಯ ತಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಾವು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ೧೧೫ನೇ ಮೈಲಿಗಲ್ಲನ್ನು ಸಂಭ್ರಮಿಸುತ್ತಿದ್ದೇವೆ. ಈ ದಿನ ಕೇವಲ ಒಂದು ಕ್ಯಾಲೆಂಡರ್ ದಿನಾಂಕವಲ್ಲ. ಇದು ಶತಮಾನಗಳಿಂದ ಮಹಿಳೆಯರು ನಡೆಸಿದ ಹೋರಾಟ, ಸಾಧಿಸಿದ ವಿಜಯ ಮತ್ತು ಸಮಾಜಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಯ ಗೌರವಾರ್ಥವಾಗಿ ಆಚರಿಸುವ ಹಬ್ಬ ಎಂದು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮುನಿರೆಡ್ಡಿ.ಜಿ ರವರು ಅಭಿಪ್ರಾಯಪಟ್ಟರು.

ಜಾನಪದ ಕಲೆಯ ಹಿನ್ನೆಲೆಯಿಂದ ಬಂದವನಾಗಿ ನಾನು ಒಂದು ಮಾತನ್ನು ಹೆಮ್ಮೆಯಿಂದ ಹೇಳಬಯಸುತ್ತೇನೆ. ನಮ್ಮ ನಾಡಿನ ಸಂಸ್ಕೃತಿ, ಹಾಡು, ಮತ್ತು ಕಲೆಗಳು ಜೀವಂತವಾಗಿರಲು ಮಹಿಳೆಯರೇ ಕಾರಣ. ಮೊಟ್ಟಮೊದಲ ಹೆಣ್ಣು ಎಂಬ ಗೀತಗಾಯನದಲ್ಲಿ ಹೇಳಿದಂತೆ, ಈ ಸೃಷ್ಟಿಯ ಆದಿಶಕ್ತಿಯೇ ಹೆಣ್ಣು. ಮನೆಯ ಜೋಗುಳದಿಂದ ಹಿಡಿದು ಹೊಲದ ಸುಗ್ಗಿ ಹಾಡಿನವರೆಗೆ ಹೆಣ್ಣಿನ ಧ್ವನಿ ಸಮಾಜದ ಜೀವನಾಡಿಯಾಗಿದೆ ಎಂದರು.

ಮಕ್ಕಳ ಹಕ್ಕುಗಳ ಸಂಸ್ಥೆಯ ದಕ್ಷಿಣ ಭಾರತದ ಪ್ರಾದೇಶಿಕ ನಿರ್ದೇಶಕರು ಜಾನ್ ರಾಬರ್ಟ್ ಮಾತನಾಡಿ ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡುವಲ್ಲಿ ತಾಯಿಯ ಪಾತ್ರ ದೊಡ್ಡದು. ಆದರೆ ಅದೇ ಸಮಯದಲ್ಲಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಸಮಾನ ಅವಕಾಶ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಬಾಲ್ಯವಿವಾಹದಂತಹ ಪಿಡುಗುಗಳನ್ನು ತೊಡೆದುಹಾಕಿ, ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ನಾವು ಬೆಂಬಲ ನೀಡಬೇಕು.

ಮಹಿಳೆಯರು ಶಿಕ್ಷಣ, ವಿಜ್ಞಾನ, ಆರೋಗ್ಯ ಮತ್ತು ಆಡಳಿತ ರಂಗಗಳಲ್ಲಿ ಪುರುಷರಿಗೆ ಸಮನಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಉಪಸ್ಥಿತರಿರುವ ತಾಲ್ಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಶಶಿಕಲಾ ಅವರು ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಆಶಾಲತ ಅವರೇ ಅದಕ್ಕೆ ಸಾಕ್ಷಿ. ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲರಾದಾಗ ಮಾತ್ರ ಒಂದು ರಾಷ್ಟ್ರ ಮುನ್ನಡೆಯಲು ಸಾಧ್ಯ.

ಬಂಗಾರಪೇಟೆ ತಾಲ್ಲೂಕು ಆರಕ್ಷಕ ವೃತ್ತ ನಿರೀಕ್ಷಕರ ಸಿ.ರವಿಕುಮಾರ್ ಮಾತನಾಡಿ ಬಂಗಾರಪೇಟೆಯ ಈ ಮಣ್ಣಿನಲ್ಲಿ ಚಿಗುರು ಟ್ರಸ್ಟ್ ಕಳೆದ ಹಲವು ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ ಕೆಲಸ ಶ್ಲಾಘನೀಯ. ವಿಶೇಷವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಿಕ್ಷಕರು ತಳಮಟ್ಟದಲ್ಲಿ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇಂದು ಸನ್ಮಾನಿತರಾಗುತ್ತಿರುವ ಪ್ರತಿಯೊಬ್ಬ ಮಹಿಳೆಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವಕ್ಕಲೇರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಿ.ಭಾಗ್ಯಲಕ್ಷ್ಮಮ್ಮ, ತೋರಲಕ್ಕಿ ಪ್ರೌಢಶಾಲೆ ಕನ್ನಡ ಶಿಕ್ಷಕಿ ಡಾ.ಮಾಲತಿ, ಟೀಕಲ್ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ನಾರಾಯಣಮ್ಮ, ಶೆಟ್ಟಿಕೊತ್ತನೂರು ಅಂಗನವಾಡಿ ಕಾರ್ಯಕರ್ತೆ ಸೌಭಾಗ್ಯ, ಮೈಲಾಂಡಹಳ್ಳಿ ಅಂಗನವಾಡಿ ಕಾರ್ಯಕರ್ತೆ ರಾಧ, ಸೌತ್ ಬ್ಯಾಂಕ್ ಬ್ಲಾಕ್ಅಂಗನವಾಡಿ ಕಾರ್ಯಕರ್ತೆ ವನಾಜ ರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಗಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿ ಎಂ.ಕೆ.ಶಶಿಕಲಾ, ಬಂಗಾರಪೇಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಮತ್ತು ಯೋಜನಾಧಿಕಾರಿ ರವಿ, ತೋರಲಕ್ಕಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರವಿ.ಬಿ.ಆರ್, ತೋರಲಕ್ಕಿ ಪ್ರೌಢಶಾಲೆ ಹಿಂದಿ ಶಿಕ್ಷಕರ ವೇಣುಗೋಪಾಲ್, ಬೈರಕೂರು ಬೌದ್ಧ ಉಪಾಸಕ ಎಂ. ರವಿ, ಭಾರತ್ ಫೌಂಡೇಶನ್ ಸಯದ್ ನದೀಮ್ ಶಾ, ಕೆ.ಜಿ.ಎಫ್ ಮಕ್ಕಳ ತಜ್ಞರು ಡಾ.ಅರುಣ್ ಕುಮಾರ್, ಡಾ.ಮಹೇಶ್, ಕೊರಮಂಡಲ್ ಕೆ.ಜಿ.ಎಫ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ಆಶಾಲತ, ಬಂಗಾರಪೇಟೆ ಆರ್.ಬಿ.ಎಸ್.ಕೆ. ಡಾ,ಮಂಜುಳ, ಡಿ.ಎಸ್.ಎಸ್. ರಮಣ, ಶಾಂತಕುಮಾರಿ, ಪಲ್ಲವಿ, ಸಂತೋಷ್, ಚಿಗುರು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಬಂಗಾರಪೇಟೆ ವಿಜ್ಞಾನ ಶಿಕ್ಷಕರು ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೆ.ಆರ್.ತೇಜೋವತಮ್ಮ ನಿರೂಪಿಸಿದರು ಈನೆಲ ಈಜಲ ವೆಂಕಟಾಚಲಪತಿ ಮತ್ತು ತಂಡ ‘ಮೊಟ್ಟಮೊದಲ ಹೆಣ್ಣು’ ಹಾಡು ಹಾಡಿದರು, ಸ್ವಾಗತವನ್ನು ಚಿಗುರು ಸಂಸ್ಥೆಯ ಏಂಜಲ್.ಪಿ, ಚಿಗುರು ಸಂಸ್ಥೆಯ ಎಸ್.ಪ್ರಭಾವತಿ ಪ್ರಾಸ್ಥಾವಿಕವಾಗಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande