ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಮಾಡಿರಿ ಇಲ್ಲವೇ ಭೂಮಿಯನ್ನು ರೈತರಿಗೆ ಹಿಂದಿರುಗಿಸಿ : ವೈ.ಎಂ. ಸತೀಶ್
ಬೆಂಗಳೂರು/ಬಳ್ಳಾರಿ, 10 ಮಾರ್ಚ್ (ಹಿ.ಸ.) ಆ್ಯಂಕರ್: ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತೀರೋ ಇಲ್ಲವೋ ಸ್ಪಷ್ಟಪಡಿಸಿ. ಇಲ್ಲವಾದಲ್ಲಿ ಅರ್ಸಲ್ಲರ್ ಮಿತ್ತಲ್, ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಕ್ಕೆ ಪಡೆದಿರುವ ಭೂಮಿಯನ್ನು ರೈತರಿಗೇ ಹಿಂದಿರುಗಿಸಿ ಎಂದು ವಿಧಾನಪರಿಷತ್ ಸದಸ್ಯರಾದ ವ
ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಮಾಡಿರಿ ಇಲ್ಲವೇ ಭೂಮಿಯನ್ನು ರೈತರಿಗೆ ಹಿಂದಿರುಗಿಸಿ : ವೈ.ಎಂ. ಸತೀಶ್


ಬೆಂಗಳೂರು/ಬಳ್ಳಾರಿ, 10 ಮಾರ್ಚ್ (ಹಿ.ಸ.)

ಆ್ಯಂಕರ್: ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತೀರೋ ಇಲ್ಲವೋ ಸ್ಪಷ್ಟಪಡಿಸಿ. ಇಲ್ಲವಾದಲ್ಲಿ ಅರ್ಸಲ್ಲರ್ ಮಿತ್ತಲ್, ವಿಮಾನ ನಿಲ್ದಾಣಕ್ಕಾಗಿ ಸ್ವಾಧೀನಕ್ಕೆ ಪಡೆದಿರುವ ಭೂಮಿಯನ್ನು ರೈತರಿಗೇ ಹಿಂದಿರುಗಿಸಿ ಎಂದು ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.

ವಿಧಾನಪರಿಷತ್ತಿನ ಬಜೆಟ್ ಅಧಿವೇಶದಲ್ಲಿ ಮಂಗಳವಾರ, ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಭೂ ಸ್ವಾಧೀನ ಮಾಡಿಕೊಂಡಿರುವ ವಿಷಯ ಪ್ರಸ್ತಾಪಿಸಿ, ಅಧಿಕಾರಿಗಳು ರಸ್ತೆಗೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿಲ್ಲ. ಅಧಿಕಾರಿಗಳು ಮತ್ತು ಸರ್ಕಾರದ ಮಧ್ಯೆ ಯಾವ ರೀತಿಯಲ್ಲಿ ಕೆಲಸ ನಡೆಯುತ್ತಿದೆ ಎನ್ನಲು ಇದು ಉತ್ತಮವಾದ ಸಾಕ್ಷಿ. ರಸ್ತೆ ಇಲ್ಲದೇ ವಿಮಾನ ನಿಲ್ದಾಣಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ಅಧಿಕಾರಿಗೆ ಗೌರವ ಸನ್ಮಾನ ಮಾಡಬೇಕು ಎಂದು ವ್ಯಂಗ್ಯವಾಡಿದರು.

ಆಗ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಂದಲೂ ವಿಮಾನ ನಿಲ್ದಾಣಕ್ಕಾಗಿ ಬೇಡಿಕೆ ಬಂದಿದೆ. ಕಾರಣ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯನ್ನು ಶೀಘ್ರದಲ್ಲೇ ಏರ್ಪಡಿಸಿ, ವಿಮಾನ ನಿಲ್ದಾಣವನ್ನು ಎಲ್ಲಿ ನಿರ್ಮಾಣ ಮಾಡಲಾಗುತ್ತದೆ ಎನ್ನುವ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಆ ನಂತರವೇ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಪ್ರಾರಂಭಿಸುವ ಕುರಿತು ಸ್ಪಷ್ಟವಾಗಿ ಹೇಳಲು ಸಾಧ್ಯ ಎಂದರು.

ಬಳ್ಳಾರಿಯಲ್ಲಿ ಪಿಪಿಪಿ ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಮಾರ್ಗ್ ಶ್ರೀ ಕೃಷ್ಣದೇವರಾಯ ಏರ್ಪೋರ್ಟ್ ಪ್ರೈವೇಟ್ ಲಿಮಿಟೆಡ್ಗೆ 03.08.2010ರಲ್ಲಿ ಲೆಟರ್ ಆಫ್ ಅವಾರ್ಡ್ (ಕಾಮಗಾರಿ ಪ್ರಾರಂಭಿಸಲು) ಪತ್ರ ನೀಡಲಾಗಿ, 06.08.2010 ರಂದು ಯೋಜನಾ ಅಭಿವೃದ್ಧಿ ಒಪ್ಪಂದಕ್ಕಾಗಿ ಸರ್ಕಾರ ಮತ್ತು ಕಂಪನಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ, ಕಂಪನಿಯು ಕಾಮಗಾರಿಯನ್ನು ಪ್ರಾರಂಭಿಸದ ಕಾರಣ ಭೂಮಿಯನ್ನು ಕಂಪನಿಗೆ ಹಸ್ತಾಂತ ಮಾಡದೇ, ಒಪ್ಪಂದವನ್ನು ರದ್ದು ಮಾಡಲಾಯಿತು ಎಂದು ಅವರು ಉತ್ತರಿಸಿದರು.

ಬಳ್ಳಾರಿ ವಿಮಾನ ನಿಲ್ದಾಣವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ನಿರ್ಮಾಣ ಮಾಡಲು ಡಿಪಿಆರ್ ಸಿದ್ದಪಡಿಸಲು ಸಮಾಲೋಚಕರನ್ನು ನೇಮಕ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.

ಆಗ, ವೈ.ಎಂ. ಸತೀಶ್ ಅವರು, ಬಳ್ಳಾರಿ ವಿಮಾನ ನಿಲ್ದಾಣ ಸೇರಿ, ಕುಡತಿನಿಯ ಆರ್ಸಲರ್ ಮಿತ್ತಲ್ಗಾಗಿ ಸ್ವಾಧೀನ ಮಾಡಿಕೊಂಡಿರುವ ಭೂಮಿಯಲ್ಲಿ, ಉದ್ದೇಶಿತ ಯೋಜನೆ ಬರದೇ ಇದ್ದಲ್ಲಿ, ಆ ಭೂಮಿಯನ್ನು ರೈತರಿಗೇ ಹಿಂದಿರುಗಿಸಿ. ಇಲ್ಲವಾದಲ್ಲಿ ಇದು ಬಿಳಿ ಆನೆ ಆಗಲಿದೆ ಎಂದು ಆಗ್ರಹಿಸಿದರು.

ಆಗ ಸಚಿವ ಎಂ.ಬಿ. ಪಾಟೀಲ್ ಅವರು, ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಪರಿಹಾರ ನೀಡಿರುವ ಕಾರಣ ಆ ಭೂಮಿಯನ್ನು ರೈತರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ. ಬಳ್ಳಾರಿ ವಿಮಾನ ನಿಲ್ದಾಣದ ರಸ್ತೆಗೆ ಅಗತ್ಯವಾಗಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಯಾವುದೇ ಕಾರಣಕ್ಕೂ ಬಿಳಿ ಆನೆ ಆಗಲು ಬಿಡುವುದಿಲ್ಲ. ಬೇರೆ ಉದ್ದೇಶಗಳಿಗೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಬಳ್ಳಾರಿಯ ಸಿರಿವಾರ ಗ್ರಾಮದ ವ್ಯಾಪ್ತಿಯಲ್ಲಿ 2009 ರಲ್ಲಿ ರೈತರ ಮತ್ತು ವಿವಿಧ ಪಕ್ಷಗಳ ತೀವ್ರ ವಿರೋಧದ ಮಧ್ಯೆ 900 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಭೂ ಸ್ವಾಧೀನ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande