
ಗದಗ, 10 ಮಾರ್ಚ್ (ಹಿ.ಸ.)
ಆ್ಯಂಕರ್:- ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವೆ ಉದ್ಭವಿಸಿರುವ ಯುದ್ಧದ ಉದ್ವಿಗ್ನ ಪರಿಸ್ಥಿತಿ ದೇಶದ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತಿದ್ದು, ಅದರ ಬಿಸಿ ಇದೀಗ ಗದಗ ಜಿಲ್ಲೆಯ ಹೋಟೆಲ್ ಉದ್ಯಮಕ್ಕೂ ತಟ್ಟಲು ಆರಂಭಿಸಿದೆ. ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಜಿಲ್ಲೆಯ ಹಲವಾರು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಸಿಲಿಂಡರ್ ಖಾಲಿಯಾಗುವ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.
ಗದಗ ನಗರದಲ್ಲಿನ ಬಹುತೇಕ ಹೋಟೆಲ್ ಗಳಲ್ಲಿ ಈಗ ಕೇವಲ ಎರಡು ಅಥವಾ ಮೂರು ಕಮರ್ಷಿಯಲ್ ಸಿಲಿಂಡರ್ಗಳಷ್ಟೇ ಸ್ಟಾಕ್ ಉಳಿದಿದ್ದು, ನಾಳೆ ಅಥವಾ ನಾಡಿದ್ದು ಅವು ಸಂಪೂರ್ಣ ಖಾಲಿಯಾಗುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. ಈಗಾಗಲೇ ಗದಗ ಜಿಲ್ಲೆಗೆ ಸಮರ್ಪಕವಾಗಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
ಈ ಕುರಿತು ಗದಗ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಸುಧಾಕರ ಮಾತನಾಡಿ, ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಹೋಟೆಲ್ ಉದ್ಯಮಕ್ಕೆ ಗಂಭೀರ ಸಂಕಷ್ಟ ಎದುರಾಗಿದೆ ಎಂದು ಹೇಳಿದ್ದಾರೆ. “ಈಗಾಗಲೇ ಹಲವಾರು ಗ್ಯಾಸ್ ಏಜೆನ್ಸಿಗಳು ‘ನೋ ಸಪ್ಲೈ’ ಎಂಬ ಸ್ಪಷ್ಟ ಸಂದೇಶ ನೀಡುತ್ತಿವೆ. ಹೀಗಾಗಿ ನಾಳೆಯಿಂದ ಗ್ಯಾಸ್ ಕಡಿಮೆ ಬಳಕೆಯಾಗುವ ಆಹಾರ ಪದಾರ್ಥಗಳನ್ನು ಮಾತ್ರ ತಯಾರಿಸುವ ನಿರ್ಧಾರ ಕೈಗೊಂಡಿದ್ದೇವೆ” ಎಂದು ತಿಳಿಸಿದ್ದಾರೆ.
ಇದರಿಂದಾಗಿ ಪೂರಿ, ಭಜ್ಜಿ, ವಡಾ ಸೇರಿದಂತೆ ಹೆಚ್ಚಿನ ಗ್ಯಾಸ್ ಹಾಗೂ ಎಣ್ಣೆ ಬಳಕೆ ಆಗುವ ಹಲವು ಪದಾರ್ಥಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. “ಗ್ಯಾಸ್ ಸಂಪೂರ್ಣವಾಗಿ ಮುಗಿದ ಬಳಿಕ ಹೋಟೆಲ್ಗಳನ್ನು ಬಂದ್ ಮಾಡುವ ಪರಿಸ್ಥಿತಿ ಬರಬಹುದು. ಆದ್ದರಿಂದ ಸರ್ಕಾರ ತಕ್ಷಣವೇ ಮಧ್ಯಪ್ರವೇಶ ಮಾಡಿ ಕಮರ್ಷಿಯಲ್ ಸಿಲಿಂಡರ್ ಪೂರೈಕೆಯನ್ನು ಸಮರ್ಪಕವಾಗಿ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಗದಗ ನಗರದಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ಪಡೆಯಲು ಜನರು ಪರದಾಡುವ ಪರಿಸ್ಥಿತಿಯೂ ಕಂಡುಬಂದಿದೆ. ಹಲವಾರು ಗ್ರಾಹಕರು ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗದೆ ಗ್ಯಾಸ್ ಏಜೆನ್ಸಿಗಳ ಕಚೇರಿಗಳಿಗೆ ಭೇಟಿ ನೀಡಿ ಪ್ರಶ್ನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಮಾರ್ಚ್ 6ರಂದು ಸಿಲಿಂಡರ್ ಬುಕ್ ಮಾಡಿದರೂ ಇಂದಿಗೂ ಸಿಲಿಂಡರ್ ಬಂದಿಲ್ಲ ಎಂದು ಹಲವಾರು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗದಲ್ಲಿ ಕೃತಕವಾಗಿ ಸಿಲಿಂಡರ್ ಅಭಾವ ಸೃಷ್ಟಿಸಲಾಗುತ್ತಿದೆ ಎಂಬ ಆರೋಪವನ್ನೂ ಕೆಲವರು ಮಾಡುತ್ತಿದ್ದಾರೆ.
ಸಿಲಿಂಡರ್ ಪಡೆಯಲು ಏಜೆನ್ಸಿಗಳ ಬಳಿ ಜನರು ಆಗಮಿಸಿ ಸ್ಪಷ್ಟನೆ ಕೇಳುತ್ತಿದ್ದರೆ, ಏಜೆನ್ಸಿ ಸಿಬ್ಬಂದಿ ಸರ್ವರ್ ಸಮಸ್ಯೆ ಉಂಟಾಗಿದೆ ಎಂದು ಹೇಳಿ ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ. ಇದರಿಂದಾಗಿ ಕೆಲ ಸಮಯ ಜನರು ಮತ್ತು ಸಿಬ್ಬಂದಿಗಳ ನಡುವೆ ವಾಗ್ವಾದಕ್ಕೂ ಕಾರಣವಾಗುತ್ತಿದೆ.
ಆದರೆ ಈ ಕುರಿತು ಗ್ಯಾಸ್ ಏಜೆನ್ಸಿಗಳ ಪ್ರತಿನಿಧಿಗಳು ಮಾತನಾಡಿ, ಗೃಹೋಪಯೋಗಿ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಆದರೆ ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆಯಲ್ಲಿ ಮಾತ್ರ ವ್ಯತ್ಯಯ ಉಂಟಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧದ ಪರಿಣಾಮ ದೇಶದ ಇಂಧನ ಸರಬರಾಜು ವ್ಯವಸ್ಥೆಯ ಮೇಲೂ ಪ್ರತಿಫಲಿಸುತ್ತಿದ್ದು, ಅದರ ಪರಿಣಾಮವಾಗಿ ಗದಗ ಜಿಲ್ಲೆಯ ಹೋಟೆಲ್ ಉದ್ಯಮ ಹಾಗೂ ಸಾರ್ವಜನಿಕರು ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುವಂತಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಿಲಿಂಡರ್ ಪೂರೈಕೆಯನ್ನು ಸರಿಪಡಿಸಬೇಕೆಂಬ ಒತ್ತಾಯ ಹೆಚ್ಚುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP