
ವಿಜಯಪುರ, 10 ಮಾರ್ಚ್ (ಹಿ.ಸ.)
ಆ್ಯಂಕರ್ : ವಿಜಯಪುರದ ಜಿತೋ ಮಹಿಳಾ ವಿಭಾಗದ ವತಿಯಿಂದ ಕ್ಯಾನ್ಸರ್ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭವ್ಯ ಕಾರ್ ಜಾಥಾವನ್ನು ಆಯೋಜಿಸಲಾಯಿತು.
ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ದೃಷ್ಟಿಯಿಂದ ಈ ವಿಶೇಷ ಜಾಥಾ ನಡೆಸಲಾಯಿತು. ನಗರದ ಜೈನ ಮಂದಿರದಿಂದ ಆರಂಭವಾದ ಕಾರ್ ಜಾಥಾ ಶ್ರೀ ಸಿದ್ದೇಶ್ವರ ದೇವಾಲಯ, ಗಾಂಧಿ ವೃತ್ತ, ವಾಟರ್ ಟ್ಯಾಂಕ್, ಶಿವಾಜಿ ವೃತ್ತ ಸೇರಿದಂತೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಸ್ಪೂರ್ತಿ ಸಭಾಂಗಣದಲ್ಲಿ ಸಂಪನ್ನವಾಯಿತು.
ಈ ಜಾಥಾದಲ್ಲಿ ಸಂಘದ ಸದಸ್ಯೆಯರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವೈದ್ಯರು ಉತ್ಸಾಹದಿಂದ ಭಾಗವಹಿಸಿದರು. ವಿಶೇಷವಾಗಿ ಕೆಂಪು ವರ್ಣದ ಉಡುಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಗಮನ ಸೆಳೆದರು. ಕ್ಯಾನ್ಸರ್ ತಡೆಗಟ್ಟುವ ವಿಧಾನಗಳು ಮತ್ತು ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಫಲಕಗಳನ್ನು ಪ್ರದರ್ಶಿಸಲಾಯಿತು.
ಕಾರ್ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಮಾತನಾಡಿ, ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಯ ಶಿಖರ ತಲುಪಿದ್ದಾಳೆ. ವೈದ್ಯಕೀಯ, ವಿಜ್ಞಾನ, ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಹತ್ವದ ಸಾಧನೆ ಮಾಡಿದ್ದಾರೆ. ತಾಯಿ, ಸಹೋದರಿ ಹಾಗೂ ಪತ್ನಿಯಾಗಿ ಸಮಾಜದಲ್ಲಿ ಮಹಿಳೆಯು ಮಹೋನ್ನತ ಪಾತ್ರ ವಹಿಸುತ್ತಾಳೆ ಎಂದು ಹೇಳಿದರು. ಮಹಿಳಾ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್ ಜಾಗೃತಿ ಜಾಥಾವನ್ನು ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯಪಟ್ಟರು.
ವೈದ್ಯೆ ಡಾ. ವಾಣಿ ಗಚ್ಚಿನಮಠ ಮಾತನಾಡಿ, ಕ್ಯಾನ್ಸರ್ ಬಗ್ಗೆ ಭಯಪಡಬಾರದು, ಅದರ ಬಗ್ಗೆ ಸರಿಯಾದ ಅರಿವು ಅಗತ್ಯ. ಪ್ರಾಥಮಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಅನೇಕರು ಕ್ಯಾನ್ಸರ್ ಎಂದು ಕೇಳಿದ ತಕ್ಷಣ ಭಯಪಟ್ಟು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಇದು ತಪ್ಪು ಮನೋಭಾವನೆ. ಆರಂಭದಲ್ಲಿಯೇ ವೈದ್ಯರ ಸಲಹೆ ಪಡೆದು ಉತ್ತಮ ಜೀವನಶೈಲಿ ಹಾಗೂ ನಿಯಮಿತ ಆಹಾರ ಪದ್ಧತಿ ರೂಢಿಸಿಕೊಂಡರೆ ಅನೇಕ ರೋಗಗಳನ್ನು ತಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾನೂನು ತಜ್ಞೆ ಡಾ. ಉಜ್ವಲಾ ಸರನಾಡಗೌಡ, ಖ್ಯಾತ ವೈದ್ಯ ಡಾ. ಕಿರಣ ಓಸ್ವಾಲ್ ಹಾಗೂ ಉದ್ಯಮಿ ಮತ್ತು ಸಮಾಜಸೇವಕ ಮಹಾವೀರ ಪಾರೇಖ್ ಆಶಯ ನುಡಿಗಳನ್ನಾಡಿದರು. ಜಿತೋ ಚೇರ್ಮನ್ ಧೀರಿಶ ಧರ್ಮದರ್ಶಿ, ಡಾ. ಅಶ್ವಿನಿ ಯಂಡಿಗೇರಿ, ಕಿರಣ್ ಸಂಕಲೇಚಾ, ಸೋನಾಲಿ ಕೋಠಾರಿ, ಸುಹಾಸಿನಿ ವಾರದ, ಡಾ. ಜ್ಯೋತಿ ಕೊರಬು, ಡಾ. ಅಥುಲ್ ಥೊಬ್ಬಿ, ಶರ್ಮಿಳಾ ಓಸ್ವಾಲ್ ಸೇರಿದಂತೆ ಅನೇಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande