
ಗದಗ, 01 ಮಾರ್ಚ್ (ಹಿ.ಸ.):
ಆ್ಯಂಕರ್:
ಜಗತ್ತಿನಲ್ಲಿ ದೊಡ್ಡ ಗಂಡಾಂತರ ತಲೆದೋರಿದ್ದು, ಶ್ರೀಮಂತ ರಾಷ್ಟ್ರಗಳು ತಮ್ಮ ಆರ್ಥಿಕ ಶಕ್ತಿಯ ಆಧಾರದಲ್ಲಿ ಸಾಮ್ರಾಜ್ಯ ಮನೋಭಾವ ತೋರಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೈರಿಮನೋಭಾವದಿಂದ ನಡೆಯುತ್ತಿರುವ ಹತ್ಯಾಕಾಂಡಗಳು ಜಗತ್ತಿನಲ್ಲಿ ಅಶಾಂತಿಯನ್ನು ಹಬ್ಬಿಸುತ್ತಿವೆ. ಇದು ಮಾನವ ಕುಲಕ್ಕೆ ಒಳ್ಳೆಯದಲ್ಲ. ಶಕ್ತಿ ಮತ್ತು ಸಾಮರ್ಥ್ಯ ಇದ್ದರೂ, ಮನುಕುಲವನ್ನು ಶಾಂತಿಯತ್ತ ಕರೆದೊಯ್ಯುವ ಔದಾರ್ಯ ಮನೋಭಾವ ಅಗತ್ಯ ಎಂದು ಹೇಳಿದರು.
ಭಾರತವು ಯಾವತ್ತೂ ವಿಶ್ವ ಶಾಂತಿಗಾಗಿ ನಿಂತ ದೇಶ. ಪ್ರೀತಿ, ವಿಶ್ವಾಸ, ಗೌರವ ಮತ್ತು ಸೌಹಾರ್ದತೆ ಜಗತ್ತಿನಲ್ಲಿ ಮರುಸ್ಥಾಪನೆ ಆಗಬೇಕು ಎಂಬುದು ನಮ್ಮ ಆಶಯ. ಅಶಾಂತಿಯನ್ನು ಯಾರೇ ಹಬ್ಬಿಸುವ ಪ್ರಯತ್ನ ಮಾಡಿದರೂ ಭಾರತ ಅದನ್ನು ಖಂಡಿಸುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಯುದ್ಧ ಪರಿಸ್ಥಿತಿಯಿಂದಾಗಿ ಕೆಲವೆಡೆ ಕನ್ನಡಿಗರು ಸಿಲುಕಿರುವ ಮಾಹಿತಿ ಬಂದಿದ್ದು, ಅವರನ್ನು ಶಾಂತವಾಗಿ ಮತ್ತು ಸುರಕ್ಷಿತವಾಗಿಕ್ಕೆ ಕರೆತರಲು ಕೇಂದ್ರ ಸರ್ಕಾರ ಗಂಭೀರ ಹೆಜ್ಜೆ ಇಡಬೇಕು ಎಂದು ಅವರು ಒತ್ತಾಯಿಸಿದರು. ನಮ್ಮ ಭಾರತೀಯರನ್ನು ಯಾರೂ ಮುಟ್ಟಲಾರರು ಎಂಬ ವಿಶ್ವಾಸವಿದೆ ಎಂದರು.
ನಾವು ಯಾರ ಪರವಾಗಿಯೂ ನಿಲ್ಲದೇ, ವಿಶ್ವ ಶಾಂತಿಯ ಪರವಾಗಿ ನಿಂತಿದ್ದೇವೆ. ಪಂಚಶೀಲ ತತ್ವಗಳಲ್ಲಿ ವಿಶ್ವಾಸ ಇಟ್ಟಿರುವ ನಮ್ಮ ದೇಶ ಶಾಂತಿಯತ್ತ ಒಲವು ತೋರಿಸುತ್ತದೆ. ಶಾಂತಿಗೆ ಕೈಜೋಡಿಸುವವರಿಗೆ ಬಲ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.
ಗದಗ ಜಿಲ್ಲೆಯವರು ಯಾರೂ ಯುದ್ಧ ನಡೆಯುತ್ತಿರುವ ಪ್ರದೇಶದಲ್ಲಿ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP