
ಬೆಂಗಳೂರು, 01 ಮಾರ್ಚ್ (ಹಿ.ಸ.):
ಆ್ಯಂಕರ್:
ವಿಶ್ವ ನಾಗರಿಕ ರಕ್ಷಣಾ ದಿನದ ಅಂಗವಾಗಿ ಬಿಕ್ಕಟ್ಟಿನ ಕ್ಷಣಗಳಲ್ಲಿ ಜೀವಗಳನ್ನು ರಕ್ಷಿಸಲು ಸದಾ ಸಜ್ಜಾಗಿರುವ ನಾಗರಿಕ ರಕ್ಷಣಾ ಸಿಬ್ಬಂದಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗೌರವ ಸಲ್ಲಿಸಿದ್ದಾರೆ.
ಈ ಕುರಿತು ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ಆಪತ್ತುಗಳು, ಪ್ರಕೃತಿ ವಿಕೋಪಗಳು ಮತ್ತು ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಮೌನವಾಗಿ ಕರ್ತವ್ಯ ನಿರ್ವಹಿಸುವ ಕಾವಲುಗಾರರ ಧೈರ್ಯ, ಸನ್ನದ್ಧತೆ ಮತ್ತು ಸೇವಾ ಮನೋಭಾವವು ನಮ್ಮ ರಾಷ್ಟ್ರದ ಸ್ಥಿತಿಸ್ಥಾಪಕತ್ವದ ಪ್ರಮುಖ ಆಧಾರಸ್ತಂಭವಾಗಿದೆ” ಎಂದು ತಿಳಿಸಿದ್ದಾರೆ.
ನಾಗರಿಕ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಸುರಕ್ಷಿತ ಮತ್ತು ಸ್ಪಂದನಶೀಲ ಭಾರತ ನಿರ್ಮಾಣದ ದಿಶೆಯಲ್ಲಿ ಸಾಮೂಹಿಕ ಬದ್ಧತೆಯನ್ನು ಪುನರುಚ್ಚರಿಸೋಣ ಎಂದು ಕರೆ ನೀಡಿದರು.
ನಾಗರಿಕ ರಕ್ಷಣಾ ಸಿಬ್ಬಂದಿಯ ತ್ಯಾಗ ಹಾಗೂ ಸಮರ್ಪಣೆಗೆ ಕೃತಜ್ಞತೆ ಸಲ್ಲಿಸಿದ ಅವರು, ಸಾರ್ವಜನಿಕರ ಸಹಭಾಗಿತ್ವವು ವಿಪತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa