
ಇಂಫಾಲ್, 01 ಮಾರ್ಚ್ (ಹಿ.ಸ.)
ಆ್ಯಂಕರ್:
ಮಣಿಪುರದಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ವಿರುದ್ಧ ಪೊಲೀಸರು ಕೈಗೊಂಡ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಾರ್ಟಿ ಸಂಘಟನೆಯೊಬ್ಬ ಸದಸ್ಯ ಹಾಗೂ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ ಸಂಘಟನೆಯ ಇಬ್ಬರು ಸಕ್ರಿಯ ಕಾರ್ಯಕರ್ತರು ಸೇರಿದ್ದಾರೆ.
ಮಣಿಪುರ ಪೊಲೀಸ್ ಪ್ರಧಾನ ಕಚೇರಿ ಪ್ರಕಟಿಸಿದ ಹೇಳಿಕೆಯ ಪ್ರಕಾರ, ಇಂಫಾಲ ಪಶ್ಚಿಮ ಜಿಲ್ಲೆಯ ಸಿಂಗ್ಜಮೇ ಪೊಲೀಸ್ ಠಾಣೆ ವ್ಯಾಪ್ತಿಯ ಖಗೆಂಪಲ್ಲಿ ಪಂಖಾ ನ್ಗಾನಾಪಿ ಥಾಂಗ್ ಮಾಮಾಂಗ್ ಪ್ರದೇಶದಲ್ಲಿರುವ ನಿವಾಸದಿಂದ ಕೆಸಿಪಿ ಕೇಡರ್ ಲೈಶ್ರಾಮ್ ಮೋನಿಶ್ ಸಿಂಗ್ ಅಲಿಯಾಸ್ ಟಾಮ್ (23) ಅವರನ್ನು ಬಂಧಿಸಲಾಗಿದೆ. ಅವರಿಂದ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಕಾರ್ಯಾಚರಣೆಯಲ್ಲಿ, ಇಂಫಾಲ ಪೂರ್ವ ಜಿಲ್ಲೆಯ ಪೊರೊಂಪತ್ ಪೊಲೀಸ್ ಠಾಣೆ ವ್ಯಾಪ್ತಿಯ ವಾಂಗ್ಖೈ ಅಯಂಗ್ಪಲ್ಲಿ ಪ್ರದೇಶದಿಂದ ಯುಎನ್‌ಎಲ್‌ಎಫ್ ಸಂಘಟನೆಯ ಇಬ್ಬರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ವಯಂ ಘೋಷಿತ ಎರಡನೇ ಲೆಫ್ಟಿನೆಂಟ್ ಅಸಿಮ್ ನೊಂಗ್ಪೋಕಾಂಗ್ಬಾ ಮೈಟೈ ಅಲಿಯಾಸ್ ನಂಗೋಯಿಬಾ (32) ಹಾಗೂ ತಂಗ್ಜಮ್ ಗಾಂಧಿ ಮೈಟೈ ಅಲಿಯಾಸ್ ಯೈಮಾ (27) ಎಂದು ಗುರುತಿಸಲಾಗಿದೆ. ಇಬ್ಬರೂ ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಆರೋಪವಿದೆ.
ಬಂಧಿತರಿಂದ ಒಂದು ಪಿಸ್ತೂಲ್, 16 ಸಜೀವ ಕಾರ್ಟ್ರಿಡ್ಜ್‌ಗಳನ್ನು ಹೊಂದಿರುವ ಎರಡು ಮ್ಯಾಗಜೀನ್‌ಗಳು ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa