

ಕೊಪ್ಪಳ, 01 ಮಾರ್ಚ್ (ಹಿ.ಸ.):
ಆ್ಯಂಕರ್ : ಅಧಿಕಾರ ಲಾಲಸೆಯಲ್ಲಿ ತೊಡಗಿ ಆಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಜನರ ಬಳಿ ಕೊಂಡೊಯ್ಯಿರಿ ಎಂದು ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಕಾರ್ಯಕರ್ತರಿಗೆ ಕರೆ ನೀಡಿದರು.
ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮುಖರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಾಯಕತ್ವ ಬದಲಾವಣೆ ವಿಷಯ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಮಣ್ಣು ಪಾಲು ಮಾಡಿದ್ದಾರೆ. ಅಧಿಕಾರಿಗಳ ಮೇಲಿನ ನಿಯಂತ್ರಣವನ್ನು ಸರಕಾರ ಕಳೆದುಕೊಂಡಿದು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಇದರ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಎಂದರು.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಕೊನೆಯ ಘಳಿಗೆಯಲ್ಲಿ ಜೆಡಿಎಸ್ ಸೇರ್ಪಡೆಗೊಂಡಾಗ 10,000 ಮತ ಪಡೆದರೆ ಹೆಚ್ಚು ಎಂದು ವಿರೋಧಿಗಳು ಕುಹಕವಾಡಿದರು. ಆದರೆ ಸಿ ವಿ ಚಂದ್ರಶೇಖರ್ ಸುಮಾರು 46,000 ಮತ ಪಡೆದು ತಮ್ಮ ಶಕ್ತಿಯನ್ನು ಸಾಬೀತುಪಡಿಸಿದರು. ಪಕ್ಷಕ್ಕೆ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಶಕ್ತಿ ತುಂಬಿದಾಗ ನಾಯಕರಿಗೆ ಬಲ ಬರುತ್ತದೆ. ಪದಾಧಿಕಾರಿಗಳು ಪ್ರತಿನಿತ್ಯ ಕೆಲಸ ಮಾಡಿ ಪಕ್ಷಕ್ಕೆ ಜನ ಬೆಂಬಲ ದೊರಕಿಸಿಕೊಡಬೇಕು ಎಂದರು.
ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನದಂದು ಪಕ್ಷದ ಪ್ರಥಮ ಗೆಲುವು ಕೊಪ್ಪಳದಿಂದಲೇ ಎಂದು
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ನಡೆಸಿದ
ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಕೊಪ್ಪಳದಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಅತ್ಯುತ್ತಮ ಮೈತ್ರಿ ಹೊಂದಿರುವುದರಿಂದ
ಎನ್ ಡಿ ಎ ಒಕ್ಕೂಟದ ಗೆಲುವನ್ನು
ತಡೆಯಲು ಯಾರಿಗೂ ಸಾಧ್ಯವಿಲ್ಲ.
ದುರಾಡಳಿತದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷಕ್ಕೆ ಕಣ್ಣು ಕಿವಿ ಇಲ್ಲದಾಗಿದೆ. ಕಳೆದ 13 ವರ್ಷ ಶಾಸಕ ಸ್ಥಾನದಲ್ಲಿರುವ ರಾಘವೇಂದ್ರ ಹಿಟ್ನಾಳ್ ಮತದಾರರಿಂದ ಗೇಟ್ ಪಾಸ್ ಪಡೆದು ಇನ್ನೆರಡು ವರ್ಷಗಳಲ್ಲಿ ಮನೆಗೆ ಹೋಗಲಿದ್ದಾರೆ. ಆದ್ದರಿಂದ ಅವರ ಬಗ್ಗೆ ಮಾತನಾಡದಿರುವುದೇ ಉತ್ತಮ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಅನುಮಾನ, ಎಂದು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 60,000 ಸದಸ್ಯತ್ವ ನೋಂದಣಿ ಗುರಿ ಹಾಕಿಕೊಳ್ಳಲಾಗಿದೆ. ಮಹಿಳಾ ವಿಭಾಗ ಸಶಕ್ತವಾಗಿದ್ದು 500 ಜನ ಮಹಿಳೆಯರ ವಿವಿಧ ತಂಡಗಳು ರಚನೆಯಾಗಿವೆ ಎಂದರು.
ಪಕ್ಷ ನಿಷ್ಠೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಪದಾಧಿಕಾರಿಗಳು ಎತ್ತಿ ಹಿಡಿಯಬೇಕು. ಇನ್ನು ಎರಡೇ ವರ್ಷಗಳಲ್ಲಿ ಸಿ ವಿಚಂದ್ರಶೇಖರ್ ಶಾಸಕರಾಗಿ ಮತ್ತು ಸಚಿವರಾಗಿ ಕಾರ್ಯನಿರ್ವಹಿಸುವುದು ಶತಸಿದ್ಧ. ಅದಕ್ಕಾಗಿ ನಾವೆಲ್ಲ ಈಗಿನಿಂದಲೇ ಪ್ರಯತ್ನ ಪಡಬೇಕು ಎಂದು ಜಿಲ್ಲಾ ವಕ್ತಾರ ಮಲ್ಲನಗೌಡ ಕೋಣನಗೌಡ್ರು ಹೇಳಿದರು.
ರಾಜ್ಯದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಮೂಲಭೂತ ಸೌಕರ್ಯಗಳು ಹದಗೆಟ್ಟಿವೆ. ಇವುಗಳ ಕುರಿತು ಜನಾಭಿಪ್ರಾಯ ರೂಪಿಸುವುದು ಪದಾಧಿಕಾರಿಗಳ ಕರ್ತವ್ಯ, ಎಂದು ಶರಣಪ್ಪ ಜಡಿ ಹೇಳಿದರು.
ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಲಾಯಿತು. ಜಿಲ್ಲಾಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಸುರೇಶ್ ಭೂಮರೆಡ್ಡಿ ಅವರಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೂ ಮೊದಲು ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಬಿಎಲ್ಎ - 2 ಕಾರ್ಯಾಗಾರವನ್ನು
ಹಮ್ಮಿಕೊಳ್ಳಲಾಗಿತ್ತು. ಶಿವಶಂಕರ ರೆಡ್ಡಿ ವಿಶೇಷ ಸಮಗ್ರ ಪರಿಷ್ಕರಣೆಯ ಮಹತ್ವ, ಅದರ ಉದ್ದೇಶಗಳನ್ನು, ಕಾನೂನು ಚೌಕಟ್ಟುಗಳನ್ನು ಹಾಗೂ ಅನುಸರಿಸಬೇಕಾದ ವಿಧಾನಗಳ ಕುರಿತು ತರಬೇತಿ ನೀಡಿದರು.
ಜೆಡಿಎಸ್ ತಾಲೂಕ್ ಗೌರವಾಧ್ಯಕ್ಷ ಈಶಪ್ಪ ಮಾದನೂರ, ಜಿಲ್ಲಾ ಜೆಡಿಎಸ್ ಗೌರವ ಅಧ್ಯಕ್ಷ
ದೇವಪ್ಪ ಕಟ್ಟಿಮನಿ, ಜಿಲ್ಲಾ ಸಂಸ್ಕೃತಿ ವಿಭಾಗದ ಅಧ್ಯಕ್ಷ ಮಂಜುನಾಥ್ ಸೊರಟೂರ, ರಾಜ್ಯ ಮುಖಂಡ ಶರಣಪ್ಪ ಕುಂಬಾರ, ನಗರ ಅಧ್ಯಕ್ಷ ಸೋಮನಗೌಡ ಹೊಗರನಾಳ, ನಗರ ಘಟಕದ ಗೌರವಾಧ್ಯಕ್ಷೆ ರತ್ನಮ್ಮ ಹಿರೇಮಠ, ನಗರ ಘಟಕದ ಮಹಿಳಾ ಅಧ್ಯಕ್ಷೆ ನಿರ್ಮಲ ಮೇದಾರ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ರಮೇಶ್ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ, ಅಲ್ಪ ಸಂಖ್ಯಾತರ ವಿಭಾಗದ ಜಿಲ್ಲಾಧ್ಯಕ್ಷ ಸಿರಾಜ್ ಬಿಜಾಪುರ್, ಜಿಲ್ಲಾ ಸಹ ವಕ್ತಾರ ಯಮನಪ್ಪ ಕಟಗಿ,
ಯಲಬುರ್ಗಾ ತಾಲೂಕು ಅಧ್ಯಕ್ಷರಾದ ಬಸವರಾಜ ಗುಳಗುಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ, ಪಕ್ಷದ ಮುಖಂಡ ಶೆಟ್ಟೆಪ್ಪ ಹೊಸಳ್ಳಿ, ಮುಖಂಡ ಶಂಕ್ರಪ್ಪ ಕೊಳ್ಳಿ ಹಾಜರಿದ್ದರು.
ಶೀರ್ಷಿಕೆಗಳು: ಜೆಡಿಎಸ್ ಪಕ್ಷ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೊಪ್ಪಳ ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಾಗಾರದಲ್ಲಿ ಅಕ್ಷತಾ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಮಾತನಾಡಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್