
ಬೆಂಗಳೂರು, 01 ಮಾರ್ಚ್ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾದ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಈಶ್ವರ ಖಂಡ್ರೆ ಭಾಗವಹಿಸಿ ಮಾತನಾಡಿದರು.
ಜಗದ್ಗುರು ರೇಣುಕಾಚಾರ್ಯರಂತಹ ಮಹಾಮಹಿಮರ ಜಯಂತಿಯನ್ನು ಸರ್ಕಾರ ಸಮಾಜದಲ್ಲಿ ಸದ್ಭಾವನೆ, ಸಾಮರಸ್ಯ, ಸೋದರತ್ವ ಹಾಗೂ ಸಹಬಾಳ್ವೆ ಬೆಳೆಸುವ ಉದ್ದೇಶದಿಂದ ಆಚರಿಸುತ್ತಿದೆ ಎಂದು ಅವರು ಹೇಳಿದರು. ಮಹಾಪುರುಷರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ ಅವರು ಸರ್ವರ ಒಳಿತಿಗಾಗಿ, ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ರೇಣುಕಾದಿ ಜಗದ್ಗುರುಗಳು ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಶಾಂತಿ’ ಎಂಬ ಸಂದೇಶ ನೀಡಿದರೆ, ಬಸವಾದಿ ಶರಣರು ‘ಸಕಲ ಜೀವಾತ್ಮರಿಗೆ ಲೇಸು, ಸರ್ವರಿಗೂ ಸಮಪಾಲು, ಸಮಬಾಳಿನ ಸಮಸಮಾಜ’ ಎಂಬ ಆದರ್ಶವನ್ನು ಸಾರಿದ್ದಾರೆ. ಎಲ್ಲ ಧರ್ಮಗಳ ಸಾರವೂ ಮಾನವೀಯತೆಯೇ ಆಗಿದ್ದು, “ನಾವು ಬದುಕಬೇಕು, ಇತರರಿಗೂ ಬದುಕಲು ಬಿಡಬೇಕು” ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವೀರಶೈವ-ಲಿಂಗಾಯತ ಮಠಮಾನ್ಯಗಳು ಸರ್ವಧರ್ಮ, ಸರ್ವಜಾತಿಯ ಜನರಿಗೆ ಅನ್ನ, ಆಶ್ರಯ ಮತ್ತು ಅರಿವು ನೀಡುವ ಮೂಲಕ ಮಹತ್ವದ ಪರಂಪರೆಯನ್ನು ಪೋಷಿಸಿಕೊಂಡು ಬಂದಿದ್ದು, ದೇಶದ ಅಭಿವೃದ್ಧಿಗೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶಂಸಿಸಿದರು.
ಯುವಶಕ್ತಿಯ ಮಹತ್ವವನ್ನು ಉಲ್ಲೇಖಿಸಿದ ಸಚಿವರು, “ಯುವಶಕ್ತಿ ಅಣುಶಕ್ತಿಗಿಂತ ಮಿಗಿಲಾದದ್ದು. ಭಾರತ ಯುವಜನರ ರಾಷ್ಟ್ರ. ಯುವಜನರು ದುಶ್ಚಟ ಮತ್ತು ದುರ್ವ್ಯಸನಗಳಿಂದ ದೂರವಿದ್ದು, ಶಾರೀರಿಕ-ಮಾನಸಿಕವಾಗಿ ಸದೃಢರಾಗಬೇಕು” ಎಂದು ಕರೆ ನೀಡಿದರು. ವಚನ ಸಾಹಿತ್ಯದಲ್ಲಿ ಸದಾಚಾರ ಹಾಗೂ ಸದ್ಗುಣಗಳನ್ನು ಬೆಳೆಸುವ ಶಕ್ತಿ ಅಡಗಿದೆ; ಅದರ ಸಾರವನ್ನು ಯುವಜನರಿಗೆ ತಲುಪಿಸಬೇಕಾಗಿದೆ ಎಂದರು.
“ಕೆಳಗೆ ಬಿದ್ದವರನ್ನು ಮೇಲೆತ್ತುವುದೇ ಧರ್ಮ. ತಂದೆ-ತಾಯಿಗಳ ಸೇವೆಯೇ ಪರಮ ಧರ್ಮ. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದೇ ನಿಜವಾದ ಧರ್ಮ” ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa