
ಜಮ್ಮು, 01 ಮಾರ್ಚ್ (ಹಿ.ಸ.):
ಆ್ಯಂಕರ್:
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆ ವ್ಯಾಪ್ತಿಯ ನಿಯಂತ್ರಣ ರೇಖೆ ಬಳಿ ಇಂದು ಮುಂಜಾನೆ ಪಾಕಿಸ್ತಾನದ ಡ್ರೋನ್ ಭಾರತದ ವಾಯುಪ್ರದೇಶಕ್ಕೆ ನುಗ್ಗಿದ ಘಟನೆ ನಡೆದಿದೆ. ಮುಂಚೂಣಿಯ ಪೋಸ್ಟ್‌ನಲ್ಲಿ ನಿಯೋಜಿಸಲಾದ ಭಾರತೀಯ ಸೇನಾ ಪಡೆಗಳು ತಕ್ಷಣವೇ ಎಚ್ಚೆತ್ತುಕೊಂಡು ಡ್ರೋನ್‌ನ್ನು ಹೊಡೆದುರುಳಿಸಲು ಗುಂಡಿನ ದಾಳಿ ನಡೆಸಿವೆ.
ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ ಸುಮಾರು 6:10ರ ವೇಳೆಗೆ ದಿಗ್ವಾರ್ ಪ್ರದೇಶದ ಮೇಲೆ ಸಂಶಯಾಸ್ಪದ ಡ್ರೋನ್ ಚಲನವಲನ ಪತ್ತೆಯಾಯಿತು. ಡ್ರೋನ್‌ನ್ನು ಉರುಳಿಸಲು ಸೈನಿಕರು 12ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದರು. ಆದರೆ ಗುಂಡಿನ ದಾಳಿಯನ್ನು ತಪ್ಪಿಸಿಕೊಂಡ ಡ್ರೋನ್ ಸ್ವಲ್ಪ ಹೊತ್ತು ಭಾರತೀಯ ಗಡಿ ಭಾಗದಲ್ಲಿ ಸುಳಿದಾಡಿ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಮರಳಿತು.
ಗಡಿಯಾಚೆಯಿಂದ ಡ್ರೋನ್ ನುಗ್ಗಿದ ಘಟನೆ ಇತ್ತೀಚಿನ ದಿನಗಳಲ್ಲಿ ಇದು ಎರಡನೇ ಬಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ 27ರಂದು ಕೂಡ ಇದೇ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್ ಚಲನವಲನ ಕಂಡುಬಂದಿದ್ದು, ಆಗಲೂ ಸೇನೆ ಗುಂಡಿನ ದಾಳಿ ನಡೆಸಿತ್ತು.
ಡ್ರೋನ್ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕ ವಸ್ತುಗಳನ್ನು ಬೀಳಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ. ಗಡಿ ಪ್ರದೇಶದಲ್ಲಿ ಎಚ್ಚರಿಕೆಯನ್ನು ಹೆಚ್ಚಿಸಲಾಗಿದ್ದು, ಪರಿಸ್ಥಿತಿಯನ್ನು ನಿಗಾವಹಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa