
ಗದಗ, 01 ಮಾರ್ಚ್ (ಹಿ.ಸ.):
ಆ್ಯಂಕರ್: ಸಹಕಾರ ಚಳವಳಿಯ ತವರೂರು ಹಾಗೂ ಪ್ರಗತಿಪರ ಚಿಂತನೆಗಳ ನೆಲೆಬೀಡಾದ ಗದಗ ಜಿಲ್ಲೆಯಲ್ಲಿಯೇ ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿ ಜೀವಂತವಿರುವುದು ನೋವಿನ ಸಂಗತಿ. ಆದರೆ ಈ ಅನಿಷ್ಠತೆಯನ್ನು ಮೆಟ್ಟಿ ನಿಲ್ಲಲು ಸರ್ಕಾರವೇ ಮುಂದಾಗಿ ಶಿಂಗಟಾಲೂರು ಗ್ರಾಮದಲ್ಲಿ ‘ಸರ್ಕಾರಿ ಸೌಹಾರ್ದ ಸಲೂನ್’ ಆರಂಭಿಸಿರುವುದು ಐತಿಹಾಸಿಕ ಸಾಮಾಜಿಕ ಕ್ರಾಂತಿಯಾಗಿದೆ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್ ಹಡಪದ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆಯ ಮೂಲಕ ಅವರು ಈ ಮಹತ್ವದ ಕ್ರಮವನ್ನು ಸ್ವಾಗತಿಸಿ, ಸಾಮಾಜಿಕ ಬದಲಾವಣೆಗೆ ಭದ್ರ ಬುನಾದಿ ಹಾಕಿದ ಗದಗ ಜಿಲ್ಲೆಯ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಇಡೀ ಸವಿತಾ ಕ್ಷೌರಿಕ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸಚಿವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಸಾಮರಸ್ಯವನ್ನೂ ಉತ್ತೇಜಿಸುವ ಕಾರ್ಯಗಳು ನಡೆಯುತ್ತಿರುವುದನ್ನು ಅವರು ಶ್ಲಾಘಿಸಿದರು.
ಪ್ರಮುಖ ಹಕ್ಕೊತ್ತಾಯಗಳು:
ಶಿಂಗಟಾಲೂರು ಗ್ರಾಮದ ಯಶಸ್ವಿ ಮಾದರಿಯನ್ನು ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್ ವ್ಯಾಪ್ತಿಗೂ ವಿಸ್ತರಿಸಿ, ಸವಿತಾ ಕ್ಷೌರಿಕ ಸಮಾಜದ ವೃತ್ತಿಬಾಂಧವರಿಗೆ ಆರ್ಥಿಕ ಭದ್ರತೆ ಒದಗಿಸಬೇಕು. ಸರ್ಕಾರವು ಸಹೋದರತ್ವ ಮತ್ತು ಸಮನ್ವಯದ ಭಾವನೆ ಬೆಳೆಸಲು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಗ್ರಾಮ ಮಟ್ಟದಲ್ಲಿ ‘ಸೌಹಾರ್ದ ಸಮನ್ವಯ ಜಾಗೃತಿ ಸಭೆ’ಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಬೇಕು. ಈ ಸರ್ಕಾರಿ ಸಲೂನ್ಗಳಲ್ಲಿ ಸೇವೆ ಸಲ್ಲಿಸುವ ಕ್ಷೌರಿಕರನ್ನು ಗೌರವ ನೌಕರರೆಂದು ಪರಿಗಣಿಸಿ, ನಿಗದಿತ ವೇತನ ಹಾಗೂ ವಿಮಾ ಸೌಲಭ್ಯ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದೇ ವೇಳೆ, ಗದಗ ಜಿಲ್ಲೆಯ ಮೇಲೆ ಅಂಟಿರುವ ತಾರತಮ್ಯದ ಕಳಂಕವನ್ನು ಅಳಿಸಿಹಾಕಿ, ಜಿಲ್ಲೆಯನ್ನು ಸಂಪೂರ್ಣ ಅಸ್ಪೃಶ್ಯತೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸರ್ಕಾರವು ವಿಶೇಷ ಸಮಿತಿ ರಚಿಸಬೇಕು. ಅದರ ಸಂಪೂರ್ಣ ಜವಾಬ್ದಾರಿಯನ್ನು ದಲಿತ ಚಳುವಳಿಯ ಮುಂಚೂಣಿ ನಾಯಕರು ಹಾಗೂ ಸವಿತಾ ಕ್ಷೌರಿಕ ಸಮಾಜದ ಹಿತೈಷಿಗಳಾದ ಎಸ್.ಎನ್. ಬಳ್ಳಾರಿ ಗುರುಗಳಿಗೆ ನೀಡಬೇಕು ಎಂದು ಕೃಷ್ಣ ಹಡಪದ ಒತ್ತಾಯಿಸಿದರು.
“ಶತಮಾನಗಳಿಂದ ಎಲ್ಲರಿಗೂ ನಿಷ್ಠೆಯಿಂದ ಕ್ಷೌರಸೇವೆ ಸಲ್ಲಿಸುತ್ತಿರುವ ಸವಿತಾ ಸಮಾಜಕ್ಕೆ ಇಂದಿಗೂ ತಾರತಮ್ಯದ ನೋವು ಕಾಡುತ್ತಿರುವುದು ದುರದೃಷ್ಟಕರ. ಸರ್ಕಾರವು ನಮ್ಮ ನ್ಯಾಯಸಮ್ಮತ ಅಳಲನ್ನು ಆಲಿಸಿ, ಶಿಂಗಟಾಲೂರು ಮಾದರಿಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಮನವಿ ಮಾಡಿದ್ದಾರೆ. ತಾರತಮ್ಯ ಅಥವಾ ತೊಂದರೆ ಎದುರಾದರೆ ತಕ್ಷಣ ಸಂಪರ್ಕಿಸುವಂತೆ ಅವರು ಕರೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯರಾದ ಹನುಮಂತಪ್ಪ ರಾಂಪುರ, ಪರಶುರಾಮ ಕೋಟೆಕಲ್ಲ ಹಾಗೂ ಖಜಾಂಚಿ ಅರುಣ ರಾಂಪುರ ಉಪಸ್ಥಿತರಿದ್ದರು.
“ಜಾತಿ ಬೇಧದ ಅಳಿವಿಗೆ ಸರ್ಕಾರವೇ ಮಧ್ಯಸ್ಥಿಕೆ ವಹಿಸಬೇಕಾದ ಸ್ಥಿತಿ ನಮ್ಮ ಒಗ್ಗಟ್ಟಿನ ಕೊರತೆಯ ಪ್ರತಿಬಿಂಬ” ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆ ಶಾಶ್ವತವಾಗಿ ನೆಲೆಗೊಳ್ಳಲು ಸರ್ಕಾರವು ಕೇವಲ ಯೋಜನೆ ಘೋಷಣೆಗಷ್ಟೇ ಸೀಮಿತವಾಗದೆ, ಶಿಂಗಟಾಲೂರು ಮಾದರಿಯನ್ನು ಇಡೀ ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಕಡ್ಡಾಯವಾಗಿ ‘ಸೌಹಾರ್ದ ಸಮನ್ವಯ ಜಾಗೃತಿ ಸಭೆ’ಗಳನ್ನು ನಡೆಸಿದರೆ ಮಾತ್ರ ಜಾತಿ ತಾರತಮ್ಯ ನಿರ್ಮೂಲನೆ ಸಾಧ್ಯ ಎಂದು ಸ್ಪೀನ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಮದೇವ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP